ಬಳ್ಳಾರಿ ಪೈರಿಂಗ್ ಪ್ರಕರಣದ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಪಿಸ್ತೂಲ್ ವಿಡಿಯೋ ವೈರಲ್

ಬಾಗಲಕೋಟೆ: ಬಳ್ಳಾರಿಯಲ್ಲಿ ನಡೆದ ಪೈರಿಂಗ್ ಪ್ರಕರಣದ ಬೆನ್ನಲ್ಲೇ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸೋರಗಾವಿ ಗ್ರಾಮದ ಯುವಕನೊಬ್ಬ ಪಿಸ್ತೂಲ್ ಹಿಡಿದು ಫೋಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Petkarmedia:ಸೋರಗಾವಿ ಗ್ರಾಮದ ಯುವಕನೊಬ್ಬ ಪಿಸ್ತೂಲ್ ಹಿಡಿದು ಫೋಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಿಜಯ್ ಎಂಬ ಯುವಕ ಬೆಡ್ ರೂಮ್‌ನೊಳಗೆ ಕೈಯಲ್ಲಿ ಪಿಸ್ತೂಲ್ ಹಿಡಿದು ಕ್ಯಾಮೆರಾ ಮುಂದೆ ಫೋಸ್ ನೀಡಿರುವುದು ಕಂಡುಬಂದಿದೆ. ಇದೇ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ಪಿಸ್ತೂಲ್ ಹಿಡಿದ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮಾಹಿತಿ ಪ್ರಕಾರ ವಿಜಯ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದವನಾಗಿದ್ದು, ತಾನು ಮುಖ್ಯಮಂತ್ರಿ, ಸಚಿವರು, ಶಾಸಕರು, ಸಿಪಿಐ ಸೇರಿದಂತೆ ಹಲವು ಗಣ್ಯರ ಜೊತೆ ಫೋಟೋ ತೆಗೆಸಿಕೊಂಡಿರುವ ಚಿತ್ರಗಳನ್ನೂ ಹಂಚಿಕೊಂಡಿದ್ದಾನೆ.

ಪೊಲೀಸರ ಪ್ರಕಾರ, ಗನ್ ಲೈಸನ್ಸ್ ಇದ್ದರೂ ಸಾರ್ವಜನಿಕವಾಗಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಗನ್ ಪ್ರದರ್ಶಿಸುವುದು ಕಾನೂನುಬಾಹಿರ. ವೈರಲ್ ವಿಡಿಯೋದಲ್ಲಿರುವ ಪಿಸ್ತೂಲ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಯುವಕನ ಬಳಿ ಶಸ್ತ್ರಾಸ್ತ್ರ ಲೈಸನ್ಸ್ ಇದೆಯೇ ಇಲ್ಲವೇ ಎಂಬ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ.

ಈ ಸಂಬಂಧ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆಗೆ ಸೂಚಿಸಲಾಗಿದೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯೆಲ್ ಅವರು, “ವೈರಲ್ ವಿಡಿಯೋದಲ್ಲಿರುವ ಪಿಸ್ತೂಲ್ ಅಸಲಿ ಅಥವಾ ನಕಲಿ ಎಂಬುದರ ಜೊತೆಗೆ, ಆತನಿಗೆ ಲೈಸನ್ಸ್ ಇದ್ದೇ ಇದೆ ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದ್ದು, ಶಸ್ತ್ರಾಸ್ತ್ರಗಳ ದುರುಪಯೋಗ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನ ಕುರಿತಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ. 


                         Petkarmedia:ಸ್ಥಳೀಯ ಸುದ್ದಿಗಳಿಗಾಗಿ ನೋಡಿ


ಕಾಮೆಂಟ್‌ಗಳು