ಇಂದು ತೆಗ್ಗಿ ಗ್ರಾಮದೇವತೆಗಳ ಜಾತ್ರೆಯ ಮಹಾರಥೋತ್ಸವ

ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರಾ ಮಹೋತ್ಸವ

By PetkarMedia news desk: Badami

ಗುಳೇದಗುಡ್ಡ: ತಾಲೂಕಿನ ತೆಗ್ಗಿ  ಗ್ರಾಮದ   ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗಲಿರುವ ಗ್ರಾಮದೇವತೆ(ದ್ಯಾಮವ್ವ ಮತ್ತು ದುರ್ಗವ್ವ) ಜಾತ್ರಾ ಮಹೋತ್ಸವದ ಅಂಗವಾಗಿ ಇಂದು(ಎ.೨೨) ಬುಧವಾರ ಮಧ್ಯಾಹ್ನ ೧೨ ಗಂಟೆಗೆ ಮಹಾರಥೋತ್ಸವ ಜರುಗಲಿದೆ.

ದೇವತೆಗಳ ಮಡಿಗಳ (ಸೀರೆಗಳ) ಹೊಳೆ ಪೂಜೆ ಮಾಡುವುದು : ಬುಧವಾರ ಮುಂಜಾನೆ ೭ ಗಂಟೆಗೆ ಗ್ರಾಮದ ದೇವಸ್ಥಾನದಿಂದ ಡೊಳ್ಳು, ಶಹನಾಯಿ  ಮುಂತಾದ ವಾದ್ಯಗಳೊಂದಿಗೆ ಒಂಬತ್ತು ಬಾಬದ ಮನೆಯ ಕಳಸದವರು ಹೊಳೆಗೆ ಅಂದರೆ ನದಿಯ ಸಂಕೇತವಾದ ಹಳ್ಳಕ್ಕೆ ಹೋಗಿ ಅಲ್ಲಿ ಗ್ರಾಮ ದೇವತೆಗಳ ಸೀರೆಯನ್ನು ಪೂಜೆ ಮಾಡಿಕೊಂಡು ಬರುತ್ತಾರೆ. ನಂತರ ಜಾತ್ರೆಗೆ ಸಿದ್ಧಗೊಂಡಿರುವ ದೇವಾಲಯದಲ್ಲಿರುವ ಗ್ರಾಮ ದೇವತೆಗಳಿಗೆ ಹೊಳೆ ಪೂಜೆ ಮಾಡಿಕೊಂಡು ತಂದ ಸೀರೆಗಳ ಮಡಿಗಳನ್ನು ದೇವತೆಗಳಿಗೆ ಉಡಿಸಿ, ದೇವತೆಗಳನ್ನು ದೇವಸ್ಥಾನದಿಂದ ಉಡಿ ತುಂಬಲು ಎಬ್ಬಿಸುತ್ತಾರೆ.  ಬುಧವಾರ ಮುಂಜಾನೆ ೮ ಗಂಟೆಯಿAದ ಗ್ರಾಮ ದೇವತೆಗಳ ತವರು ಮನೆಯಾದ ಬಡಿಗೇರ ಮನೆತನದಿಂದ ಉಡಿ ತುಂಬುವುದು ಪ್ರಾರಂಭವಾಗಿ ನಂತರ ಗಾಮದ ಒಂಬತ್ತು ಬಾಬದ ಮನೆಗಳು ಹಾಗೂ ಗ್ರಾಮದ ಪ್ರತಿಯೊಂದು ಮನೆಯವರು ದೇವತೆಗಳಿಗೆ ಭಕ್ತಿಯಿಂದ ಬೇಡಿಕೊಂಡಿರುವ ಭಕ್ತರು ಬಂಗಾರ, ಬೆಳ್ಳಿ ಹಾಕುತ್ತಾರೆ. ಗ್ರಾಮ ದೇವತೆಗಳಿಗೆ ಹೂವು, ಹಣ್ಣು, ಸೀರೆ, ಹಸಿರು ಬಳೆ, ಎಲೆ, ಅಡಿಕೆ, ಉತ್ತತ್ತಿ, ಅರಸಿನಕೊಂಬು, ಬಾಳೆಹಣ್ಣು ಸೇರಿದಂತೆ ಮಧ್ಯಾಹ್ನದವರೆಗೆ ಸಾವಿರಾರು ಭಕ್ತರ ಸಮೂಹದವರು ದೇವತೆಗಳಿಗೆ ಉಡಿ ತುಂಬುತ್ತಾರೆ. 

ರಥೋತ್ಸವಕ್ಕೆ ಹಗ್ಗ ಮತ್ತು ಕಳಸ ತರುವುದು : ತೆಗ್ಗಿ ಗ್ರಾಮದ ಕುರಿಯವರ ಮನೆಯಿಂದ ರಥದ ಕಳಸವನ್ನು ತರುತ್ತಾರೆ, ಮೇಟಿ ಅವರ ಮನೆಯಿಂದ ರಥದ ಹಗ್ಗವನ್ನು ವಾದ್ಯಗಳೊಂದಿಗೆ ತಂದು ರಥೋತ್ಸವಕ್ಕೆ ಸಿದ್ಧತೆ ಮಾಡುತ್ತಾರೆ. 

ಗ್ರಾಮದೇವತೆಗಳ ಮೂರ್ತಿಗಳೊಂದಿಗೆ ಮಹಾರಥೋತ್ಸವ : ಮಹಾರಥೋತ್ಸವದಲ್ಲಿ ಗ್ರಾಮದೇವತೆಗಳ ಮೂರ್ತಿಗಳನ್ನು ಇರಿಸಿ ಬುಧವಾರ ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವ ಜರುಗುವುದು. ತೆಗ್ಗಿ, ರಾಘಾಪೂರು, ತಿಮ್ಮಸಾಗರ, ಕೆಲವಡಿ, ತೋಗಣಸಿ, ಹಂಸನೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಗೂ ಗೋವಾ ರಾಜ್ಯದ ಭಕ್ತರು ಸೇರಿದಂತೆ ಸಾವಿರಾರು ಭಕ್ತಿ ಸಾಗರದಲ್ಲಿ ಗ್ರಾಮ ದೇವತೆಗಳ ಮಹಾರಥೋತ್ಸವ ಜರುಗಲಿದೆ.

ಒಂದೊತ್ತಿನವರಿಗೆ ಉಡಿ ತುಂಬುವುದು : ಮಹಾರಥೋತ್ಸವದ ನಂತರ ಗ್ರಾಮದ ಮುಖ್ಯ ಆವರಣದಲ್ಲಿರುವ ಗ್ರಾಮ ದೇವತೆಗಳ ಹಂದರದಲ್ಲಿ ದೇವತೆಗಳನ್ನು ಇಡಲಾಗುತ್ತದೆ. ನಂತರ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಜಾತ್ರೆಯ ನಿಮಿತ್ತ ಒಂದೊತ್ತು (ಉಪವಾಸ) ಇದ್ದವರಿಗೆ ದೇವತೆಗಳ ಹಂದರದಲ್ಲಿ ಜಾತ್ರೆಯ ಕಮೀಟಿಯವರಿಂದ ಉಡಿ ತುಂಬುತ್ತಾರೆ. ನಂತರ ಒಂದೊತ್ತಿನವರು ಅಲ್ಲಿಯೇ ಪ್ರಸಾದ ಮಾಡುತ್ತಾರೆ.

ಕಾಮೆಂಟ್‌ಗಳು