ಬಾಗಲಕೋಟೆ ನಗರದ ಟ್ರಾಫಿಕ್ ಸಮಸ್ಯೆ, ಬಸ್ ಮಾರ್ಗ ಬದಲಾವಣೆಗೆ ಬ್ಯೂಮಾ ಮನವಿ
ಬಾಗಲಕೋಟೆ, ಜುಲೈ 9: ಬಾಗಲಕೋಟೆ ವ್ಯಾಪಾರ ಮತ್ತು ಉದ್ಯಮಿಗಳ ಸಂಘ (BUMA) ನಿಯೋಗವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕರನ್ನು ಭೇಟಿ ಮಾಡಿ ನಗರದ ಟ್ರಾಫಿಕ್ ಸಮಸ್ಯೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಹಲವು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಗರದ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ವಾಹನ ಸಂಚಾರ ನಿರ್ವಹಣೆ ಹಾಗೂ ಟ್ರಾಫಿಕ್ ಸಮಸ್ಯೆಗಳ ಕುರಿತು ಚರ್ಚಿಸಿ, ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಅದೇ ವೇಳೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕರಿಗೆ ಸಲ್ಲಿಸಿದ ಮನವಿಯಲ್ಲಿ, ಇಲಕಲ್, ರಾಯಚೂರು, ಮುದ್ದೇಬಿಹಾಳ ಹಾಗೂ ಕುಷ್ಟಗಿ ಮಾರ್ಗದಿಂದ ಬರುವ ಬಸ್‌ಗಳು ಸಂಗಮ ಕ್ರಾಸ್‌ನಿಂದ ಮೊದಲು ಹಳೆಯ ಬಸ್ ನಿಲ್ದಾಣದ ಮೂಲಕ ಸಂಚರಿಸಿ ಬಳಿಕ ನವನಗರ ಬಸ್ ನಿಲ್ದಾಣಕ್ಕೆ ತೆರಳುವಂತೆ ಮಾರ್ಗ ಬದಲಾವಣೆ ಮಾಡುವಂತೆ ಒತ್ತಾಯಿಸಲಾಯಿತು. ಇದರಿಂದ ಇಂಧನ ಹಾಗೂ ಸಮಯದ ಅನಗತ್ಯ ವ್ಯಯ ತಪ್ಪುವುದಲ್ಲದೆ, ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ತಿಳಿಸಲಾಯಿತು.
ಇದಲ್ಲದೆ, ಕೆಲವು ಬಸ್‌ಗಳ ನಾಮಫಲಕದಲ್ಲಿ "ಬಾಗಲಕೋಟೆ" ಬದಲಿಗೆ ಕೇವಲ "ನವನಗರ" ಎಂದು ನಮೂದಿಸುವ ಪದ್ಧತಿಯನ್ನು ಕೈಬಿಡಬೇಕು, ಹಿಂದೆ ಸಂಚರಿಸುತ್ತಿದ್ದ ಬನಹಟ್ಟಿ–ಬೆಂಗಳೂರು ಹವಾನಿಯಂತ್ರಿತ ಬಸ್ ಸೇವೆಯನ್ನು ಪುನರಾರಂಭಿಸಬೇಕು ಹಾಗೂ ನಗರ ಸಾರಿಗೆ ಮಿನಿ ಬಸ್ ಸೇವೆಯನ್ನು ಮತ್ತೆ ಆರಂಭಿಸಬೇಕು ಎಂದು ಮನವಿ ಮಾಡಲಾಯಿತು.
ನಿಯೋಗದ ನೇತೃತ್ವವನ್ನು ಸಂಘದ ಅಧ್ಯಕ್ಷ ರವಿ ಕುಮಟಗಿ ವಹಿಸಿದ್ದರು. ಉಪಾಧ್ಯಕ್ಷ ರಾಮ ಮುಂದಡಾ, ಶ್ರೀನಿವಾಸ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ಅಮೃತಕರ ಹಾಗೂ ಸದಸ್ಯರಾದ ಸಿದ್ದು ಪಟ್ಟಣಶೆಟ್ಟಿ, ಆಂಜನೇಯ ಕಾಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ