ಕರ್ತವ್ಯ ಲೋಪ:ರಾಜಕುಮಾರ ಯರಗಲ್ ಅಮಾನತು

ಬಾಗಲಕೋಟೆ: ಕರ್ತವ್ಯ ಲೋಪ, ಕರ್ತವ್ಯ ನಿರ್ಲಕ್ಷ್ಯ, ದುರ್ವರ್ತನೆ ಹಾಗೂ ಅಧಿಕಾರ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ ಯರಗಲ್ ಅವರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಡಿಎಚ್‌ಒ ಪುತ್ರಿ ಡಾ. ಅಂಕಿತಾ ಯರಗಲ್ ಅವರು ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿದ್ದ ವೇಳೆ ಕರ್ತವ್ಯಕ್ಕೆ ಹಾಜರಾಗದೆ ವೇತನ ಪಡೆದಿರುವುದು ಹಾಗೂ ಅನುಮತಿ ಇಲ್ಲದೆ ಎಸ್‌.ಎನ್‌. ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪ್ಯಾಥಾಲಜಿ ವ್ಯಾಸಂಗ ಮಾಡುತ್ತಿದ್ದ ಆರೋಪದ ಬಗ್ಗೆ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಬಾಗಲಕೋಟೆ ಜಿಪಂ ಸಿಇಒ ಗಜಾನನ ಬಾಲೆ ಅವರು ವಿಚಾರಣೆಗೆ ನೋಟಿಸ್ ನೀಡಿದ್ದರು. ಸೆಪ್ಟೆಂಬರ್ 16ರಂದು ಡಾ. ರಾಜಕುಮಾರ ಯರಗಲ್ ವಿಚಾರಣೆಗೆ ಹಾಜರಾಗಿದ್ದರು. ಡಾ. ಅಂಕಿತಾ ವಿಚಾರಣೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಮತ್ತೆ ನೋಟಿಸ್ ನೀಡಲಾಗಿತ್ತು.

ಇಂದು ಡಾ. ಅಂಕಿತಾ ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಯಿಂದ ಡಿಎಚ್‌ಒ ರಾಜಕುಮಾರ ಯರಗಲ್ ಅಮಾನತು ಆದೇಶ ಹೊರಬಿದ್ದಿದೆ.

ಈ ಹಿಂದೆ ಕೂಡ ಡಾ. ರಾಜಕುಮಾರ ಯರಗಲ್ ಅಮಾನತುಗೊಂಡಿದ್ದರು. ಇದೀಗ ಮತ್ತೆ ಅಮಾನತು ಆದೇಶ ಹೊರಬಿದ್ದಿದೆ.


ಕಾಮೆಂಟ್‌ಗಳು