ನಶಿಸುತ್ತಿರುವ ಚೌಡಕಿ ಕಲೆಯ ಉಳಿವಿಗೆ ಗಲಗಲಿಯಲ್ಲಿ ರಾಜ್ಯಮಟ್ಟದ ಸ್ಪರ್ಧೆ
ಬಾಗಲಕೋಟೆ: ನಶಿಸುತ್ತಿರುವ ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ರಾಜ್ಯಮಟ್ಟದ ಚೌಡಕಿ ಹಾಡುಗಳ ಸ್ಪರ್ಧೆ ಆಯೋಜಿಸಲಾಗಿತ್ತು.
ಗಲಗಲಿಯ ಶ್ರೀ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಬೀಳಗಿ–ಗಲಗಲಿ ಘಟಕಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ಚೌಡಕಿ ವಾದ್ಯ ನುಡಿಸುವ ಮೂಲಕ ಉದ್ಘಾಟಿಸಿದರು.
ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಂದ ಸುಮಾರು 20 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಕಲಾವಿದರು ಚೌಡಕಿಯ ಮೂಲ ಶ್ರುತಿ ಮತ್ತು ತಾಳಗಳೊಂದಿಗೆ ಸಾಂಪ್ರದಾಯಿಕ ಹಾಡುಗಳನ್ನು ಪ್ರಸ್ತುತಪಡಿಸಿದರು. ಹಳೆಯ ಜನಪದ ಹಾಡುಗಳ ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಕಾರ್ಯಕ್ರಮದ ವಿಶೇಷವಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಜನಪದ ಕಲೆಗಳು ನಶಿಸದೆ ಮುಂದಿನ ಪೀಳಿಗೆಗೂ ತಲುಪಬೇಕು. ಚೌಡಕಿಯ ಮೂಲ ಶ್ರುತಿ ಮತ್ತು ತಾಳಗಳನ್ನು ಸಮನ್ವಯಗೊಳಿಸಿ ಹಳೆಯ ಹಾಡುಗಳಿಗೆ ಹೊಸ ಜೀವ ತುಂಬುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಚೌಡಕಿ ಜನಪದ ಕಲಾವಿದೆ ರಾಧಾಬಾಯಿ ಮಾರುತಿ ಮಾದರ್ ಮಾತನಾಡಿ, ಚೌಡಕಿ ಕಲೆ ನಮ್ಮ ಸಂಸ್ಕೃತಿಯ ಅಮೂಲ್ಯ ಸಂಪತ್ತು. ಇಂತಹ ಸ್ಪರ್ಧೆಗಳು ಕಲಾವಿದರಿಗೆ ಪ್ರೋತ್ಸಾಹ ನೀಡುವುದರ ಜತೆಗೆ, ಯುವಪೀಳಿಗೆಗೆ ಕಲೆಯನ್ನು ಪರಿಚಯಿಸಲು ಸಹಕಾರಿಯಾಗುತ್ತವೆ ಎಂದರು.
ಹಿರಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಮಾತನಾಡಿ, ಚೌಡಕಿ ಹಾಡುಗಳನ್ನು ಕೇವಲ ಒಂದು ಪರಂಪರೆಗೆ ಸೀಮಿತಗೊಳಿಸದೆ ಸಾಂಸ್ಕೃತಿಕ ಜನಪದ ಕಲೆಯಾಗಿ ಬೆಳೆಸಬೇಕು. ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಸ್ಪರ್ಧೆ, ಪ್ರಶಸ್ತಿ ಮತ್ತು ಪ್ರೋತ್ಸಾಹದ ಮೂಲಕ ಕಲೆಯ ಉಳಿವಿಗೆ ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಗಲಗಲಿ ಬಸವೇಶ್ವರ ಅರ್ಬನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ನಿಂಗಪ್ಪ ಗೋಳಿಪಲ್ಲೆ ಮಾತನಾಡಿ, ತಮ್ಮ ತಾಯಿ ಲಿಂಗೈಕ್ಯ ಶಾಂತಾಬಾಯಿ ಶಂಭು ಗೋಳಿಪಲ್ಲೆ ಅವರ ಸ್ಮರಣಾರ್ಥ ಸ್ಥಾಪಿಸಿರುವ ಸಮಾಜ ಸೇವಾ ಪ್ರತಿಷ್ಠಾನದ ಮೂಲಕ ಜನಪದ ಕಲೆ ಮತ್ತು ಸಂಸ್ಕೃತಿಯ ಉಳಿವಿಗೆ ಮುಂದಿನ ದಿನಗಳಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದರು.
ಮಹಿಳಾ ಕಾರ್ಯಕರ್ತೆ ಅನುಶ್ರೀ ಬಿರಾದಾರ ಮಾತನಾಡಿ, ಕಲಿತುಕೊಂಡು ಮನೆಯಲ್ಲೇ ಉಳಿದಿರುವ ಮಹಿಳಾ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು. ಹಿರಿಯರು ಪ್ರೋತ್ಸಾಹ ನೀಡಿದರೆ ಹೆಚ್ಚಿನ ಮಹಿಳೆಯರು ತಮ್ಮ ಪ್ರತಿಭೆ ಪ್ರದರ್ಶಿಸಲು ಮುಂದೆ ಬರುತ್ತಾರೆ ಎಂದು ಹೇಳಿದರು.
ಮರೆಯಾಗುತ್ತಿರುವ ಚೌಡಕಿ ಕಲೆಗೆ ವೇದಿಕೆ ಕಲ್ಪಿಸಿದ ಈ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಕಲಾವಿದರು ತಮ್ಮ ಗಾಯನ ಪ್ರತಿಭೆ ಪ್ರದರ್ಶಿಸಿದರು. ಸಾಂಪ್ರದಾಯಿಕ ಹಾಡುಗಳು ಹಾಗೂ ಚೌಡಕಿ ವಾದ್ಯದ ಲಯಬದ್ಧ ಪ್ರಸ್ತುತಿ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಸಿ.ಎಸ್. ನಾಗನೂರ, ವಿ.ಜಿ. ಬಾಳಶೆಟ್ಟಿ, ಆನಂದ ಎಸ್. ಇಂಗಳಗಾವಿ, ಎಚ್.ಪಿ. ಠಾಣೆ, ಶಂಕರರೆಡ್ಡಿ ಟಿ. ಬುದ್ನಿ, ಜಿ.ಬಿ. ಕಪ್ಪರದ, ರಾಮಣ್ಣ ಕಡಾಕಡಿ, ವೆಂಕನಗೌಡ ಆರ್. ಪಾಟೀಲ, ರಮೇಶ ಕ. ಕತ್ತಿ, ಲಿಯಾಖತ್ ಬಾಗವಾನ, ಸುರೇಶ ಸಂ. ಪಟ್ಟಣಶೆಟ್ಟಿ, ಶಿವಕುಮಾರ ಅಲಮೇಲ, ಮುರುಗಯ್ಯ ಕಾಶಿ ಸೇರಿದಂತೆ ಗಣ್ಯರು, ಕಲಾವಿದರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಪರಶುರಾಮ ಪೇಟಕರ್, ಬಾಗಲಕೋಟೆ.




ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ