ಜ.10:ಬಸವೇಶ್ವರ ಇಂಜನೀಯರಿಂಗ್ ಕಾಲೇಜಿನಲ್ಲಿ 15ನೇ ಪದವಿ ಪ್ರದಾನ

ಬಾಗಲಕೋಟೆ:ಬಸವೇಶ್ವರ ಇಂಜನೀಯರಿಂಗ್ ಕಾಲೇಜಿನ 15ನೇ ಪದವಿ ಪ್ರದಾನ ಸಮಾರಂಭವನ್ನು ಜ.10 ಶನಿವಾರ ಮಧ್ಯಾಹ್ನ 4 ಗಂಟೆಗೆ ಕಾಲೇಜಿನ ನೂತನ ಸಭಾಭವನ (ಬಿಇಸಿ ಆಡಿಟೋರಿಯಂ)ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದುಈ ವಿಷಯವನ್ನು ಪ್ರಾಚಾರ್ಯ ಡಾ. ಬಿ. ಆರ್. ಹಿರೇಮಠ  ತಿಳಿಸಿದರು.

Petkarmedia;ಬಸವೇಶ್ವರ ಇಂಜನೀಯರಿಂಗ್ ಕಾಲೇಜ

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕರ್ನಾಟಕದ ಪ್ರತಿಷ್ಠಿತ ಬಿ.ವಿ.ವಿ. ಸಂಘದ ಅಂಗ ಸಂಸ್ಥೆಯಾದ ಈ ಕಾಲೇಜು 62 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ವಜ್ರ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಿಕೊಂಡಿದೆ. 2007ರಲ್ಲಿ ಯುಜಿಸಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿಯಿಂದ ಶೈಕ್ಷಣಿಕ ಸ್ವಾಯತ್ತತೆ ಪಡೆದಿದೆ. ಎನ್‌ಬಿಎ, ನ್ಯಾಕ್, ನಿರ್ಫ್–ಇನ್ನೋವೇಶನ್ ಮಾನ್ಯತೆಗಳೊಂದಿಗೆ ವಿಶ್ವ ಬ್ಯಾಂಕ್ ಸಹಾಯದ ಟೆಕ್ಯೂಪ್ ಯೋಜನೆಯಡಿ ಕಾಲೇಜು ಶ್ರೇಷ್ಠ ಸಾಧನೆಗೈದಿದೆ. ಪವನಶಕ್ತಿ ಕ್ಷೇತ್ರದ ಸಾಧನೆಗೆ ಕೇಂದ್ರ ಸಚಿವರಿಂದ ಪ್ರಶಂಸೆ ಹಾಗೂ ಪ್ರಶಸ್ತಿಗೂ ಪಾತ್ರವಾಗಿದೆ.

ಈವರೆಗೆ 14 ಪದವಿ ಪ್ರದಾನ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸಿರುವ ಕಾಲೇಜು, 2023–24ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗಾಗಿ ಈ ಬಾರಿ 15ನೇ ಪದವಿ ಪ್ರದಾನ ಸಮಾರಂಭ ಆಯೋಜಿಸಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಐಐಟಿ ಮುಂಬಯಿಯ ಉಪ ನಿರ್ದೇಶಕರು (ಹಣಕಾಸು, ಮೂಲಸೌಕರ್ಯ ಮತ್ತು ಆಡಳಿತ) ಪ್ರೊ. ರವೀಂದ್ರ ಗುಡಿ ಆಗಮಿಸಿ ಪದವಿ ಪ್ರದಾನ ಮಾಡಲಿದ್ದು, ಘಟಿಕೋತ್ಸವ ಭಾಷಣ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ವಹಿಸಲಿದ್ದಾರೆ.

ವೇದಿಕೆಯಲ್ಲಿ ಬಿ.ವಿ.ವಿ. ಸಂಘದ ಗೌರವ ಕಾರ್ಯದರ್ಶಿ ಶ್ರೀ ಮಹೇಶ ಎನ್. ಆಥಣಿ, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಆರ್. ಎನ್. ಹೆರಕಲ್, ಪ್ರಾಚಾರ್ಯ ಡಾ. ಬಿ. ಆರ್. ಹಿರೇಮಠ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಕೆ. ಚಂದ್ರಶೇಖರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿರಲಿದ್ದಾರೆ.

717 ಪದವೀಧರರಿಗೆ ಪದವಿ:

2023–24ನೇ ಸಾಲಿನಲ್ಲಿ 11 ವಿಭಾಗಗಳ 660 ಬಿ.ಇ., 6 ಸ್ನಾತಕೋತ್ತರ ವಿಭಾಗಗಳ 57 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 717 ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಬಿ.ಇ. ವಿಭಾಗದಲ್ಲಿ 47 ರ್ಯಾಂಕ್‌ಗಳು ಲಭಿಸಿದ್ದು, 13 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಪಡೆದು 16 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಸ್ನಾತಕೋತ್ತರ (ಎಂ.ಬಿ.ಎ) ವಿಭಾಗದಲ್ಲಿ 14 ರ್ಯಾಂಕ್‌ಗಳು ಲಭಿಸಿದ್ದು, ಒಬ್ಬ ವಿದ್ಯಾರ್ಥಿ ಪ್ರಥಮ ರ್ಯಾಂಕ್‌ನೊಂದಿಗೆ ಒಂದು ಚಿನ್ನದ ಪದಕ ಪಡೆಯಲಿದ್ದಾರೆಎಂದು  ತಿಳಿಸಿದರು. ಈ ವೇಳೆ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಕೆ. ಚಂದ್ರಶೇಖರ ಉಪಸ್ಥಿತರಿದ್ದರು.

ಕಾಮೆಂಟ್‌ಗಳು