15 ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತರ ಭರ್ಜರಿ ದಾಳಿ:8 ಹಿಟ್ಯಾಚಿ, 10 ಟಿಪ್ಪರ್ ವಶ

ಹುನಗುಂದ:ಅಕ್ರಮ ಮರಳು ದಂದೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ, ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ಬಾಗಲಕೋಟೆ ಜಿಲ್ಲೆಯ ಹುನಗುಂದ ಹಾಗೂ ಇಳಕಲ್ ಭಾಗದಲ್ಲಿ ಭರ್ಜರಿ ದಾಳಿ ನಡೆಸಿದ್ದಾರೆ.

ನಿನ್ನೆ ಆರಂಭಗೊಂಡ ದಾಳಿ ಕಾರ್ಯಾಚರಣೆ ಇಂದು ಸಹ ಮುಂದುವರೆದಿದ್ದು, ಹುನಗುಂದ–ಇಳಕಲ್ ವ್ಯಾಪ್ತಿಯ ಒಟ್ಟು ೧೫ ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ೮ ಹಿಟ್ಯಾಚಿ ವಾಹನಗಳು, ೧೦ ಟಿಪ್ಪರ್‌ಗಳು, ೨ ಬೋಟ್‌ಗಳು ಹಾಗೂ ೨ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

Petkarmedia:ಹುನಗುಂದ–ಇಳಕಲ್ ವ್ಯಾಪ್ತಿಯ  ೧೫ ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ತಾಲೂಕಿನ ಹಿರೇಮಳಗಾವಿ ಗ್ರಾಮದ ಮಲಪ್ರಭಾ ನದಿ ದಡ, ಹಳ್ಳ–ಕೊಳ್ಳ ಪ್ರದೇಶಗಳು ಹಾಗೂ ಕರಡಿ ಗ್ರಾಮ ವ್ಯಾಪ್ತಿಯ ಪಟ್ಟಾ ಭೂಮಿಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಒಟ್ಟು ೬೦ ಬ್ರಾಸ್ ಮರಳನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಬೆಂಗಳೂರು ಲೋಕಾಯುಕ್ತ ಡಿಎಸ್‌ಪಿ ಸುನೀಲ್ ನಾಯಕ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಇನ್ಸ್‌ಪೆಕ್ಟರ್‌ಗಳಾದ ಎ.ಎಸ್. ಗೂದಿಗೊಪ್ಪ, ಎಸ್.ಬಿ. ಪಾಟೀಲ್, ನಾಗರಾಜ್ ಕಿಲಾರೆ, ಬಾಬು ಹಾಗೂ ಅನೀಲ್ ಸೇರಿದಂತೆ ಸುಮಾರು ೨೫ ಸಿಬ್ಬಂದಿಯ ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು.

ದಾಳಿ ನಡೆಸಿದ ೧೫ ಸ್ಥಳಗಳಲ್ಲೂ ಅಕ್ರಮ ಮರಳು ಅಡ್ಡೆಗಳ ಮಾಲೀಕರು, ಸಾಗಣೆ ಜಾಲ ಮತ್ತು ಸಂಬಂಧಿತ ದಾಖಲೆಗಳ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.



Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು