ಬಾಗಲಕೋಟೆ ಜ.10 : ಚಾಲುಕ್ಯರ ಗತವೈಭವವನ್ನು ರಾಷ್ಟ್ರಮಟ್ಟದಲ್ಲಿ ಸಾರುವ ಉದ್ದೇಶದಿಂದ ಚಾಲುಕ್ಯ ಉತ್ಸವ–2025 ಅನ್ನು ಇದೇ ಜನವರಿ 19ರಿಂದ 21ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಚಾಲುಕ್ಯ ಉತ್ಸವ–2025ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನವರಿ 19ರಂದು ಬಾದಾಮಿ, 20ರಂದು ಪಟ್ಟದಕಲ್ಲ, ಹಾಗೂ 21ರಂದು ಐಹೊಳಗಳಲ್ಲಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು. ಸಮಯಾವಕಾಶ ಕಡಿಮೆ ಇರುವುದರಿಂದ ಎಲ್ಲ ಸಮಿತಿಗಳು ತ್ವರಿತವಾಗಿ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚಿಸಿದರು. ಜ.12ರಂದು ಮಧ್ಯಾಹ್ನ 3 ಗಂಟೆಗೆ ಬಾದಾಮಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಿದ್ಧತೆ ಕುರಿತ ವಿಶೇಷ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಮೂರು ದಿನಗಳ ಉತ್ಸವದಲ್ಲಿ ಭಾಗವಹಿಸುವ ಕಲಾವಿದರ ಪಟ್ಟಿಯನ್ನು ಅಂತಿಮಗೊಳಿಸಿ ಆಹ್ವಾನ ಪತ್ರಿಕೆ ಮುದ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಬಾದಾಮಿ, ಪಟ್ಟದಕಲ್ಲ ಮತ್ತು ಐಹೊಳೆಯಲ್ಲಿ ಉತ್ಸವದ ವೇದಿಕೆ ಸಿದ್ಧತೆಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾರ್ಯಪ್ರಾರಂಭಿಸಬೇಕು ಎಂದು ಸೂಚಿಸಿದರು. ಸ್ಮಾರಕಗಳ ಸುತ್ತಮುತ್ತ ಸ್ವಚ್ಛತೆ ಕಾರ್ಯ ಕೈಗೊಳ್ಳಿ, ರಸ್ತೆಗಳಲ್ಲಿ ಇರುವ ತಗ್ಗು-ಗುಂಡಿಗಳನ್ನು ಮುಚ್ಚುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದರು. ಪಟ್ಟದಕಲ್ಲ ಹಾಗೂ ಐಹೊಳೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಸ್ವಚ್ಛತಾ ಕಾರ್ಯ ಆರಂಭಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸೂಚಿಸಿದರು. ಉತ್ಸವ ನಡೆಯುವ ಮೂರು ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ, ಕಲಾವಿದರನ್ನು ವೇದಿಕೆಗೆ ಕರೆತರಲು ವಾಹನಗಳ ವ್ಯವಸ್ಥೆ, ವಸತಿ ಹಾಗೂ ಊಟದ ವ್ಯವಸ್ಥೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಹೋಟೆಲ್, ಸಮುದಾಯ ಭವನ ಹಾಗೂ ವಸತಿ ನಿಲಯಗಳನ್ನು ಗುರುತಿಸಿ ಪಟ್ಟಿ ತಯಾರಿಸುವಂತೆ ತಿಳಿಸಲಾಯಿತು. ಸ್ಥಬ್ದಚಿತ್ರಗಳ ತಯಾರಿಯನ್ನು ಅಂತಿಮಗೊಳಿಸಿ ಜಿಲ್ಲೆದೆಲ್ಲೆಡೆ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದರು. ಉತ್ಸವದ ಮುನ್ನಾದಿನ ಗ್ರಾಮೀಣ ಕ್ರೀಡೆಗಳಾದ ಕುಸ್ತಿ ಹಾಗೂ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ಉತ್ಸವಕ್ಕೆ ಸಂಬಂಧಿಸಿದ ವಿವಿಧ ಸಮಿತಿಯ ಅಧಿಕಾರಿಗಳು ಹಾಗೂ ಅಧಿಕಾರೇತರ ಸದಸ್ಯರು ಉಪಸ್ಥಿತರಿದ್ದರು.
#BagalkotNews #ChalukyaUtsav2025 #NationalChalukyaUtsav #BagalkotDistrict #Badami #Pattadakal #Aihole #KannadaNews #Petkarmedia #KarnatakaNews #CulturalFestival #HeritageOfKarnataka #DistrictAdministration #LocalNews
-Petkarmedia News Desk

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ