ಜನವರಿ 21ರಿಂದ ಧರ್ಮ ಜಾಗೃತಿ ಯಾತ್ರೆ: ಜಗದ್ಗುರು ಘೋಷಣೆ

ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರಗಳ ಲೋಕಾರ್ಪಣೆ ಹಾಗೂ ಮಹಾಕುಂಭಾಭಿಷೇಕದ ಪೂರ್ವಭಾವಿಯಾಗಿ ರಾಜ್ಯದಾದ್ಯಂತ ಭಕ್ತರ ಅಂತಃಕರಣ ಶುದ್ಧಿಗಾಗಿ ಸಂಚಾರಿ ಧರ್ಮ ಜಾಗೃತಿ ಯಾತ್ರೆಯನ್ನು ಜನವರಿ 21ರಿಂದ ಹಮ್ಮಿಕೊಳ್ಳಲಾಗುವುದು ಎಂದು ಶ್ರೀಶೈಲ ಫೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

                                                Petkarmedia : ಸಭೆಯಲ್ಲಿ ಶ್ರೀಶೈಲ ಶ್ರೀಗಳು  ಮಾತನಾಡಿದರು.

ನಗರದ ಎಪಿಎಂಸಿಯಲ್ಲಿ ಬುಧವಾರ ನಡೆದ ಶ್ರೀಕ್ಷೇತ್ರ ಯಡೂರಿನ ಮಹಾಕುಂಭಾಭಿಷೇಕ, ಲಕ್ಷದೀಪೋತ್ಸವ ಹಾಗೂ ಕೃಷ್ಣಾರತಿ ಸಮಾರಂಭದ ಪೂರ್ವಭಾವಿ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಯಡೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳು ಅಂತಿಮ ಹಂತ ತಲುಪಿವೆ ಎಂದು ತಿಳಿಸಿದರು.

ಗರ್ಭಾಲಯದ ಸುತ್ತುಪೌಳಿ, ಪ್ರದಕ್ಷಿಣಾಪಥ, ರಥಪಥ, ಮುಖಮಂಟಪ ಕಾಮಗಾರಿಗಳು ಪೂರ್ಣಗೊಂಡಿದ್ದು, ಉತ್ತರ–ದಕ್ಷಿಣ ಮಹಾದ್ವಾರ, ರಾಜಗೋಪುರಗಳು, ನೂತನ ಗೋಡೆ, ಯಾತ್ರಿ ನಿವಾಸ, ಮಕ್ಕಳಿಗಾಗಿ ಅಮೇಜಿಂಗ್ ಥೀಮ್ ಪಾರ್ಕ್ ಹಾಗೂ ಶ್ರೀಮಠದ ನೂತನ ಆಡಳಿತ ಕಚೇರಿ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ಮಾರ್ಚ್ 6ರಂದು ನಡೆಯುವ ಲೋಕಾರ್ಪಣೆ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ನದಿಗಳ ಜಲ ಹಾಗೂ ಐದು ಸಾವಿರ ಮಹಿಳೆಯರು ಕುಂಭಗಳಲ್ಲಿ ತರುವ ಕೃಷ್ಣಾ ನದಿಯ ಜಲದಿಂದ ರಾಜಗೋಪುರಗಳಿಗೆ ಮಹಾಕುಂಭಾಭಿಷೇಕ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಮಾರ್ಚ್ 1ರಿಂದ 3ರವರೆಗೆ ಪ್ರಾತಃಕಾಲ ಕಾಶಿಪೀಠದ ನೂತನ ಜಗದ್ಗುರುಗಳ ವೈಭವೋಪೇತ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಮಾರ್ಚ್ 3ರ ಸಂಜೆ ಭದ್ರಕಾಳಿ–ವೀರಭದ್ರೇಶ್ವರ ಕಲ್ಯಾಣೋತ್ಸವ ಹಾಗೂ ವಿಶ್ವಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಮಾರ್ಚ್ 4ರಂದು ಮಹಾಕುಂಭಾಭಿಷೇಕದ ಧಾರ್ಮಿಕ ವಿಧಿವಿಧಾನಗಳು, ಮಹಿಳೆಯರಿಂದ ರಜತ ರಥೋತ್ಸವ, ಗುಗ್ಗುಳೋತ್ಸವ, ಪುರವಂತರ ಮಹಾಮೇಳ ಹಾಗೂ ವೀರ ಪುರವಂತರ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಾರ್ಚ್ 5ರಂದು ಯಡೂರು ಗುರುಕುಲದ 12ನೇ ವಾರ್ಷಿಕೋತ್ಸವ ಹಾಗೂ ಧರ್ಮ ಸಂಸ್ಕೃತಿ ಸಮ್ಮೇಳನ ನಡೆಯಲಿದ್ದು, ಮಾರ್ಚ್ 6ರಂದು ಮಹಾಕುಂಭಾಭಿಷೇಕ, ರಾಜಗೋಪುರಗಳ ಲೋಕಾರ್ಪಣೆ, ಕಳಸಾರೋಹಣ, ನೂತನ ಯಾತ್ರಿ ನಿವಾಸ, ಆಡಳಿತ ಕಚೇರಿ ಹಾಗೂ ಥೀಮ್ ಪಾರ್ಕ್ ಉದ್ಘಾಟನೆ, ಲಕ್ಷದೀಪೋತ್ಸವ ಹಾಗೂ ಕೃಷ್ಣಾ ನದಿ ತಟದಲ್ಲಿ ಕೃಷ್ಣಾರತಿ ನಡೆಯಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಈರಣ್ಣ ಅಥಣಿ, ಪ್ರಭುಸ್ವಾಮಿ ಸರಗಣಾಚಾರಿ, ವಿಜು ಅಂಗಡಿ, ಸಂತೋಷ ಜಕಾತಿ, ಮಹೇಶ ಅಂಗಡಿ, ಚಂದ್ರು ಬ್ಯಾಳಿ, ವೀರೇಶ ಉಪ್ಪಿನ, ಮುರಗೇಶ ನಾರಾ, ರಾಜು ಪಲ್ಲೇದ, ಆನಂದ ಸಾಸನೂರ, ಬಸವರಾಜ ಪರ್ವತಿಮಠ, ವೀರೇಶ ಅಥಣಿ, ಶರಣಪ್ಪ ಗುಳೆದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಯುಗಾದಿ ಪಾಡ್ಯವೇ ಭಾರತೀಯರ ಹೊಸ ವರ್ಷ:  ಫಾಲ್ಗುಣ ಮಾಸ ಅಂತ್ಯವಾಗಿ ಚೈತ್ರಮಾಸ ಆರಂಭವಾಗುವ ಯುಗಾದಿ ಪಾಡ್ಯವೇ ಭಾರತೀಯರ ಹೊಸ ವರ್ಷ. ಭಾರತೀಯ ಸಂಸ್ಕೃತಿ ಹಾಗೂ ಧರ್ಮಪರಂಪರೆಯನ್ನು ಅಳವಡಿಸಿಕೊಂಡು ಶಾಂತಿಯುತವಾಗಿ ಸಾಗುವುದು ನಮ್ಮ ದೇಶದ ವಿಶೇಷತೆ. ಯುಗಾದಿಯನ್ನು ಹೊಸ ವರ್ಷದಾಗಿ ಆಚರಿಸಬೇಕೆಂದು ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 



Petkarmedia:ಸ್ಥಳೀಯ ಸುದ್ದಿಗಳಿಗಾಗಿ ನೋಡಿ

ಕಾಮೆಂಟ್‌ಗಳು