ಬಾದಾಮಿ:ಅಂಧಮಕ್ಕಳ ನಾಟ್ಯಯೋಗಕ್ಕೆ ಪಟ್ಟದಕಲ್ಲಿನಲ್ಲಿ ಭಾರೀ ಮೆಚ್ಚುಗೆ

ಬಾದಾಮಿ:ಅವರೆಲ್ಲ ಅಂಧಮಕ್ಕಳು. ಆದರೆ ಅವರ ಆತ್ಮವಿಶ್ವಾಸ, ಶಿಸ್ತು ಮತ್ತು ಸಾಹಸಮಯ ಯೋಗಪ್ರದರ್ಶನ ನೆರೆದ ಪ್ರೇಕ್ಷಕರನ್ನು ಕ್ಷಣಕಾಲದಲ್ಲೇ ಮಂತ್ರಮುಗ್ಧರನ್ನಾಗಿಸಿತು. ಬಾಲಯೋಗಪಟುಗಳ ಒಂದೊಂದು ಯೋಗಭಂಗಿಯೂ ಕಠಿಣವಾಗಿದ್ದರೂ ಅಷ್ಟೇ ಸೌಂದರ್ಯಮಯವಾಗಿ ಮೂಡಿ, ಪ್ರೇಕ್ಷಕರ ಮೈಮನದಲ್ಲಿ ರೋಮಾಂಚನ ಹರಡಿತು.

Petkarmedia: ಅಂಧಮಕ್ಕಳ ಸಾಹಸಮಯ ಯೋಗಪ್ರದರ್ಶನ

ಚಾಲುಕ್ಯ ಉತ್ಸವದ ಎರಡನೇ ದಿನವಾದ ಮಂಗಳವಾರ, ಶಿಲ್ಪಕಲೆಯ ತೊಟ್ಟಿಲು ಪಟ್ಟದಕಲ್ಲಿನ ವಿಕ್ರಮಾದಿತ್ಯ ವೇದಿಕೆಯಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಹೊಳೆಯಾಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯ ಮಕ್ಕಳು ಪ್ರದರ್ಶಿಸಿದ ನಾಟ್ಯಯೋಗ ವಿಶೇಷ ಗಮನ ಸೆಳೆದಿತು.

ಶಾಲೆಯ ಶಿಕ್ಷಕ ಶಿವಾನಂದ ಕೆಲೂರ ಅವರ ಮಾರ್ಗದರ್ಶನದಲ್ಲಿ ನಡೆದ ಈ ಪ್ರದರ್ಶನದಲ್ಲಿ ಐದು ವರ್ಷದ ಪುಟ್ಟ ಕಂದಮ್ಮಗಳಿಂದ ಹಿಡಿದು 15 ವರ್ಷದವರೆಗಿನ ಮಕ್ಕಳು ಮುಕ್ತಹಸ್ತ ವೃಶ್ಚಾಸನ ಸೇರಿದಂತೆ ಹಲವು ಕಠಿಣ ಯೋಗಭಂಗಿಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಮಕ್ಕಳ ಪ್ರತಿಯೊಂದು ಯೋಗಭಂಗಿಯೂ ಶ್ರಮ, ಸಾಧನೆ ಮತ್ತು ಸಂಕಲ್ಪದ ಜೀವಂತ ಸಾಕ್ಷಿಯಾಯಿತು. ಪ್ರದರ್ಶನದ ಅಂತ್ಯಕ್ಕೆ ಪ್ರೇಕ್ಷಕರು ಕರತಾಡನದ ಮೂಲಕ ಭಾರೀ ಪ್ರೋತ್ಸಾಹ ನೀಡಿದರು.

ಸ್ಥಳೀಯ ಕಲಾವಿದರ ಪ್ರತಿಭೆಗೆ ವೇದಿಕೆ

ಚಾಲುಕ್ಯ ಉತ್ಸವವು ಸ್ಥಳೀಯ ಹಾಗೂ ರಾಜ್ಯದ ವಿವಿಧ ಭಾಗಗಳ ಕಲಾವಿದರ ಪ್ರತಿಭೆ ಅನಾವರಣಕ್ಕೆ ಪ್ರಮುಖ ವೇದಿಕೆಯಾಗಿದೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ಭರತನಾಟ್ಯ, ಶಾಸ್ತ್ರೀಯ ಸಂಗೀತ, ದಾಸರಪದ, ಭಜನಾಪದ, ಜಾನಪದ ನೃತ್ಯ, ಶಿವಭಜನೆ ಸೇರಿದಂತೆ ವೈವಿಧ್ಯಮಯ ಕಲಾ ಪ್ರದರ್ಶನಗಳು ಜರುಗಿದವು.

ಇದಾದ ಬಳಿಕ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರ ಸಂಗೀತ ರಾತ್ರಿ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಜೊತೆಗೆ ವಿವಿಧ ಜಿಲ್ಲೆಗಳ ಕಲಾವಿದರು ತಮ್ಮ ಕಲಾಪ್ರಸ್ತುತಿಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ವಿಶೇಷವಾಗಿ ಬೆಂಗಳೂರಿನ ಆಕ್ಸಿಜನ್ ನೃತ್ಯ ತಂಡ ಪ್ರದರ್ಶಿಸಿದ ನೃತ್ಯ ರೂಪಕದಲ್ಲಿ ನವಿಲುಗಳ ವಿಶಿಷ್ಟ ಭಂಗಿಗಳು ಎಲ್ಲರ ಗಮನ ಸೆಳೆದವು.

#Petkarmedia #ChalukyaUtsav #Pattadakal #BlindChildrenTalent#NaatyaYoga #Bagalkote #KannadaNews #CulturalEvent

ಕಾಮೆಂಟ್‌ಗಳು