ಗದಗ: ಐತಿಹಾಸಿಕ ಹಾಗೂ ಪುರಾತನ ದೇವಸ್ಥಾನಗಳ ಊರಾದ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಡಿಪಾಯ ತೋಡುವ ವೇಳೆ ಚಿನ್ನಾಭರಣಗಳಿಂದ ತುಂಬಿದ್ದ ಚೊಂಬು ಪತ್ತೆಯಾಗಿರುವ ಘಟನೆ ಸಂಚಲನ ಮೂಡಿಸಿದೆ.
ಲಕ್ಕುಂಡಿಯ ಕಸ್ತೂರೆವ್ವ ರಿತ್ತಿ ಎಂಬವರ ಮನೆಯಲ್ಲಿ ಅಡಿಪಾಯ ಹಾಕುವ ಸಂದರ್ಭ ಮಣ್ಣಿನೊಳಗೆ ಚೊಂಬು ಸಿಕ್ಕಿದ್ದು, ಅದನ್ನು ತೆರೆದು ಪರಿಶೀಲಿಸಿದಾಗ ಅದರೊಳಗೆ ಚೈನ್, ಬಳೆ, ರಿಂಗ್ ಸೇರಿದಂತೆ ಚಿನ್ನಾಭರಣಗಳು ಇರುವುದು ಬೆಳಕಿಗೆ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಅಚ್ಚರಿಗೊಂಡಿದ್ದು, ಸುದ್ದಿ ಕ್ಷಣಾರ್ಧದಲ್ಲಿ ಇಡೀ ಊರಿಗೆ ಹರಡಿದೆ.
ಚೊಂಬು ಸಿಕ್ಕಿರುವ ಮನೆಯ ಪಕ್ಕದಲ್ಲೇ ಪುರಾತನ ಲಕ್ಷ್ಮೀ ದೇವಸ್ಥಾನ ಇರುವುದರಿಂದ, ಈ ಚಿನ್ನಾಭರಣಗಳು ದೇವಾಲಯಕ್ಕೆ ಸೇರಿದವೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲ್ಯಾಣ ಚಾಲುಕ್ಯರ ಕಾಲದ ವೈಭವವನ್ನು ಹೊತ್ತುಕೊಂಡಿರುವ ಲಕ್ಕುಂಡಿ ಗ್ರಾಮವು 11 ಮತ್ತು 12ನೇ ಶತಮಾನದ ಅನೇಕ ದೇವಸ್ಥಾನಗಳು, ಶಿಲ್ಪಕಲೆಯ ಅಪರೂಪದ ಮಾದರಿಗಳು, ಹಾಗೂ 101 ದೇವಸ್ಥಾನಗಳು ಮತ್ತು 101 ಭಾವಿಗಳು ಇರುವ ವಿಶಿಷ್ಟ ಪೌರಾಣಿಕ ಊರಾಗಿ ಪ್ರಸಿದ್ಧವಾಗಿದೆ. ಇಂತಹ ಐತಿಹಾಸಿಕ ಹಿನ್ನೆಲೆ ಇರುವ ಊರಲ್ಲಿ ಈ ರೀತಿಯ ನಿಧಿ ಪತ್ತೆಯಾಗಿರುವುದು ಪುರಾತತ್ವ ಹಾಗೂ ಧಾರ್ಮಿಕ ಮಹತ್ವ ಪಡೆದ ವಿಚಾರವಾಗಿದೆ.
ಚಿನ್ನಾಭರಣಗಳ ಮೂಲ, ಅವುಗಳ ಕಾಲಘಟ್ಟ ಹಾಗೂ ದೇವಾಲಯಕ್ಕೆ ಸಂಬಂಧ ಹೊಂದಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳ ವರದಿ ಬಳಿಕವೇ ಸ್ಪಷ್ಟತೆ ದೊರೆಯಲಿದೆ.
#Lakkundi #GadagNews #GoldPotFound #HistoricalVillage #TempleGold #Archaeology #Petkarmedia

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ