ಬಾದಾಮಿ: ಉತ್ತರ ಕರ್ನಾಟಕದ ಸುಪ್ರಸಿದ್ಧ ಸುಕ್ಷೇತ್ರ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ೫ ಗಂಟೆಗೆ ಮಹಾ ರಥೋತ್ಸವವು ಲಕ್ಷಾಂತರ ಭಕ್ತರ ಭಕ್ತಿ–ಭಾವಗಳ ನಡುವೆ ಸಡಗರ, ಸಂಭ್ರಮದಿಂದ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಡಿಸೆಂಬರ್ ೨೭ರಿಂದ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶನಿವಾರ ಬೆಳಿಗ್ಗೆ ಬನಶಂಕರಿದೇವಿಗೆ ರುದ್ರಾಭಿಷೇಕ ಹಾಗೂ ಕ್ಷೀರಾಭಿಷೇಕವನ್ನು ಪೂಜಾರ ಕುಟುಂಬದವರು ನೆರವೇರಿಸಿದರು. ನಂತರ ಸಾಂಪ್ರದಾಯಿಕವಾಗಿ ರಥಾಂಗ ಹೋಮ ಮತ್ತು ಪೂಜೆ ನೆರವೇರಿಸಿ, ಮಾಡಲಗೇರಿಯಿಂದ ತಂದ ರಥದ ಹಗ್ಗದಿಂದ ಭಕ್ತರು ರಥವನ್ನು ಎಳೆದರು.
ರಥಕ್ಕೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ಸಮರ್ಪಿಸಿ, “ಬನಶಂಕರಿದೇವಿ ನಿನ್ನ ಪಾದಕ ಶಂಭು ಕೋ…” ಎಂಬ ನಾಮಸ್ಮರಣೆಯೊಂದಿಗೆ ಭಕ್ತರು ಭಕ್ತಿ ಮೆರೆದರು. ಈ ಸಂದರ್ಭದಲ್ಲಿ ಬನಶಂಕರಿ ದೇವಸ್ಥಾನ ಸಮಿತಿಯ ಚೇರಮನ್ ವೆಂಕಟಭಟ್ ಪೂಜಾರ ಸೇರಿದಂತೆ ಪೂಜಾರ ಕುಟುಂಬದವರು ಉಪಸ್ಥಿತರಿದ್ದರು.
ಮಹಾ ರಥೋತ್ಸವದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಶಿವಕುಮಾರ ಹಿರೇಮಠ, ಹನುಮಂತ ಅಪ್ಪನ್ನವರ, ಯುವ ಮುಖಂಡ ಮಹೇಶ್ ಹೊಸಗೌಡ್ರ, ತಹಶೀಲ್ದಾರ್ ಕಾವ್ಯಶ್ರೀ ಎಚ್., ತಾಲ್ಲೂಕು ಪಂಚಾಯಿತಿ ಇ.ಓ. ಸತೀಶ ಮಾಕೊಂಡ, ಚೊಳಚಗುಡ್ಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಕ್ಷಿತಾ ಮರಡಿತೋಟದ, ಪಿಡಿಒ, ಗ್ರಾ.ಪಂ. ಸದಸ್ಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿ.ಪಿ.ಐ. ಕರೆಪ್ಪ ಬನ್ನೆ, ಪಿ.ಎಸ್.ಐ. ಹನುಮಂತ ನೆರಳೆ ಸೇರಿದಂತೆ ಗುಳೇದಗುಡ್ಡ, ಕೆರೂರ, ಬಾಗಲಕೋಟಿಯಿಂದ ಆಗಮಿಸಿದ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ಹರಿದು ಬಂದ ಭಕ್ತ ಸಾಗರ
ಮಹಾರಥೋತ್ಸವದ ದಿನ ಶನಿವಾರ ಬೆಳಿಗ್ಗೆಯಿಂದಲೇ ಹೊರಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ–ತಾಲೂಕುಗಳ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಬನಶಂಕರಿಗೆ ಆಗಮಿಸಿ, ಮಹಾರಥೋತ್ಸವದಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ