ಬಾದಾಮಿ ಬನಶಂಕರಿದೇವಿ ಮಹಾರಥೋತ್ಸವ ಇಂದು – ಭಕ್ತಸಾಗರಕ್ಕೆ ಸಿದ್ಧತೆ

ಬಾದಾಮಿ:ಉತ್ತರ ಕರ್ನಾಟಕದ ಸುಪ್ರಸಿದ್ಧ ಬನಶಂಕರಿ ದೇವಿ ದೇವಸ್ಥಾನದ ಮಹಾರಥೋತ್ಸವವು ಶನಿವಾರ ಸಂಜೆ 5 ಗಂಟೆಗೆ ಭಕ್ತಿಭಾವದಿಂದ ಜರುಗಲಿದೆ. ಬನಶಂಕರಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಡಿಸೆಂಬರ್ 27ರಿಂದ ಆರಂಭವಾಗಿದ್ದು, ಬನದ ಹುಣ್ಣಿಮೆ ದಿನವಾದ ಶನಿವಾರ ಜ.3 ಸಂಜೆ ಮಹಾರಥೋತ್ಸವಕ್ಕೆ ವಿಶೇಷ ಮಹತ್ವವಿದೆ.

Petkarmedia: ಭಕ್ತರ ಆರಾಧ್ಯದೇವತೆ ಬಾದಾಮಿ ಬನಶಂಕರಿ ದೇವಿ

ಮಹಾರಥೋತ್ಸವದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ್ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.

ಜಾತ್ರೆಯ ಪ್ರಮುಖ ಆಚರಣೆಯಾಗಿ ಶನಿವಾರ ಸಂಜೆ 4 ಗಂಟೆಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಿಂದ ಜಗದೀಶ ಅಮಾತಿಗೌಡರ ಹಾಗೂ ಮಾಗುಂಡಪ್ಪ ಕೆಂಗಾರ ಕುಟುಂಬದವರು ಹಳಿಬಂಡಿ ಮೂಲಕ ರಥದ ನಾಲ್ಕು ಹಗ್ಗಗಳನ್ನು ತರಲಿದ್ದಾರೆ. ಈ ಸಂಪ್ರದಾಯಕ್ಕೆ ವಿಶೇಷ ಭಕ್ತಿಭಾವದ ಮಹತ್ವವಿದೆ.

ಇದೇ ವೇಳೆ ಜ.7ರಂದು ಸಂಜೆ 5 ಗಂಟೆಗೆ ಕಳಸ ಇಳಿಯುವ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ಚೊಳಚಗುಡ್ಡ ಗ್ರಾಮ ಪಂಚಾಯತ್ ಹಾಗೂ ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯವರು ನೀರು, ವಿದ್ಯುತ್, ಸ್ವಚ್ಛತೆ, ಭದ್ರತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿದ್ದಾರೆ.

ಮಹಾರಥೋತ್ಸವದ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ದೇವಸ್ಥಾನ ಆಡಳಿತ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಿವೆ.



Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು