ಬಾದಾಮಿ: ಚಾಲುಕ್ಯರ ಕಾಲದ ಗತವೈಭವವನ್ನು ಸಾರುವ ಚಾಲುಕ್ಯ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಚಾಲುಕ್ಯ ರಥಯಾತ್ರೆಗೆ ಸೋಮವಾರ ನಗರ ಸರಕಾರಿ ಪ್ರೌಢಶಾಲೆ ಸಮೀಪ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅದ್ದೂರಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸುಮಾರು 11 ವರ್ಷಗಳ ಬಳಿಕ ಚಾಲುಕ್ಯ ಉತ್ಸವವನ್ನು ಪುನರ್‌ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಚಾಲುಕ್ಯರ ಯುಗದ ವೈಭವ, ಇತಿಹಾಸ—ವಿಶೇಷವಾಗಿ ಇಮ್ಮಡಿ ಪುಲಿಕೇಶಿ ಅವರ ಸಾಧನೆಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಮುಂದಿನ ವರ್ಷಗಳಿಂದ ಪ್ರತಿವರ್ಷವೂ ಚಾಲುಕ್ಯ ಉತ್ಸವವನ್ನು ನಿಯಮಿತವಾಗಿ ಆಯೋಜಿಸಲಾಗುವುದು” ಎಂದರು.
ಭವ್ಯ ಮೆರವಣಿಗೆ:ಸರಕಾರಿ ಪ್ರೌಢಶಾಲೆಯಿಂದ ಆರಂಭವಾದ ಆಕರ್ಷಕ ಮೆರವಣಿಗೆ ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಟಾಂಗಾ ನಿಲ್ದಾಣ, ರಾಮದುರ್ಗ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಎಪಿಎಂಸಿ ಎದುರಿನ ಚಾಲುಕ್ಯ ಉತ್ಸವದ ಮುಖ್ಯ ವೇದಿಕೆಗೆ ತಲುಪಿತು. ಮೆರವಣಿಗೆಯಲ್ಲಿ ಕರಡಿಮಜಲು, ಡೊಳ್ಳುಕುಣಿತ, ಗೊಂಬೆಕುಣಿತ, ಗೆಜ್ಜೆಕುಣಿತ, ಮಹಿಳಾ ಡೊಳ್ಳುಕುಣಿತ, ವೀರಗಾಸೆ, ಗೆಜ್ಜೆಮೇಳ, ನಂದಿಧ್ವಜ, ಚಂಡೆವಾದನ, ನಗಾರಿವಾದನ, ಸತ್ತಿಗೆಕುಣಿತ, ಜಗ್ಗಲಿಕೆ, ಹಕ್ಕಾಪಿಕ್ಕಿ ಕುಣಿತ, ಝಾಂಜ ಪಥಕ, ಪೂಜಾಕುಣಿತ, ರುದ್ರತಾಂಡವ ಡೋಲ್, ಹಗಲು ವೇಷ ಕುಣಿತ, ಕುಂಭಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಸಡಗರ–ಸಂಭ್ರಮದಿಂದ ಭಾಗವಹಿಸಿ ಕಲೆ ಪ್ರದರ್ಶಿಸಿವೆ.
ಇಲಕಲ್ ಸೀರೆಯಲ್ಲಿ ಪೂರ್ಣಕುಂಭ ಹೊತ್ತ 201 ಮಹಿಳೆಯರು ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದರು. ಶಾಸಕರು, ಜಿಲ್ಲಾ ಪಂಚಾಯತ್ ಸಿಇಒ ಶಶಿಧರ ಕುರೇರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಡೊಳ್ಳು ಬಾರಿಸುವ ಮೂಲಕ ಜನರ ಗಮನ ಸೆಳೆದರು.
ಅಧಿಕಾರಿಗಳ ಉಪಸ್ಥಿತಿ:ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ. ಸಿಇಒ ಶಶಿಧರ ಕುರೇರ, ಎಸ್.ಪಿ. ಸಿದ್ಧಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ. ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು, ನೌಕರರು ಹಾಗೂ ಕುಂಭ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಗರದಲ್ಲಿ ಹಬ್ಬದ ವಾತಾವರಣ:
ಸುಮಾರು ಹನ್ನೊಂದು ವರ್ಷಗಳ ನಂತರ ನಡೆಯುತ್ತಿರುವ ಚಾಲುಕ್ಯ ಉತ್ಸವದಿಂದ ವಾತಾಪಿಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಬಸ್ ನಿಲ್ದಾಣದಿಂದ ರಾಮದುರ್ಗ ವೃತ್ತದವರೆಗೆ ಜನಸಾಗರ ಕಂಡುಬಂತು. ಬನಶಂಕರಿ ಜಾತ್ರೆ ಹಾಗೂ ಚಾಲುಕ್ಯ ಉತ್ಸವ ಒಂದೇ ದಿನ ನಡೆದ ಕಾರಣ ಸೋಮವಾರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
#ಚಾಲುಕ್ಯಉತ್ಸವ#ಚಾಲುಕ್ಯರಥಯಾತ್ರೆ#ಬಾದಾಮಿ#ವಾತಾಪಿ#ಜಾನಪದಕಲೆ#ಡೊಳ್ಳುಕುಣಿತ#ಕರ್ನಾಟಕಸಂಸ್ಕೃತಿ#ಇತಿಹಾಸವೈಭವ
#ಚಾಲುಕ್ಯಸಾಮ್ರಾಜ್ಯ
#ಇಮ್ಮಡಿಪುಲಿಕೇಶಿ
#ಸಾಂಸ್ಕೃತಿಕಮೆರವಣಿಗೆ
#ಹಬ್ಬದವಾತಾವರಣ



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ