ಬಾಗಲಕೋಟೆ:ದೇಶದ ಎಲ್ಲ ಶಾಸ್ತ್ರಗಳ ಮೂಲವೇ ಹಸ್ತಪ್ರತಿ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಬಾಗಲಕೋಟೆ:ಹಳೆಗನ್ನಡ, ಶಾಸನಗಳು ಹಾಗೂ ಹಸ್ತಪ್ರತಿಗಳು ನಮ್ಮ ಜ್ಞಾನದ ಅಧ್ಯಯನದ ಮೂಲ ಬೇರುಗಳಾಗಿವೆ. ಆ ಮೂಲ ಬೇರುಗಳ ಕುರಿತು ಪ್ರಸ್ತುತ ಕಾಲಘಟ್ಟದಲ್ಲಿ ಗಂಭೀರ ಅಧ್ಯಯನ ಅಗತ್ಯವಿದ್ದು, ಇವು ದೇಶದ ಅಮೂಲ್ಯ ಆಸ್ತಿಗಳೆಂದು ಪರಿಗಣಿಸಿ ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನದ ಅಧ್ಯಕ್ಷರಾದ ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.




ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ ಹಾಗೂ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ವಿಶ್ವಮಾನವ ಸಭಾಭವನದಲ್ಲಿ ಎರಡು ದಿನಗಳ ಕಾಲ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.

“ನಮ್ಮ ನಾಡಿನಷ್ಟೇ ಅಲ್ಲ, ವಿಶ್ವದ ಪ್ರಾಚೀನ ಸಂಸ್ಕೃತಿಯನ್ನು ಅರಿಯಲು ಹಸ್ತಪ್ರತಿಗಳ ಅಧ್ಯಯನ ಅನಿವಾರ್ಯ. ಕಾವ್ಯ, ಶಾಸ್ತ್ರ, ನಾಟಕ ಸಾಹಿತ್ಯ, ಊರಿನ ಸಾಮಾಜಿಕ–ಸಾಂಸ್ಕೃತಿಕ ವಿವರಗಳನ್ನು ಒಳಗೊಂಡ ಬರಹಗಳು ಹಾಗೂ ಶಾಸನಗಳನ್ನು ಸ್ಥೂಲವಾಗಿ ಹಸ್ತಪ್ರತಿಗಳೆಂದು ಕರೆಯಲಾಗುತ್ತದೆ. ವಿಶ್ವದ ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಯಲು ಇವುಗಳ ಸಂರಕ್ಷಣೆ ಅತ್ಯಾವಶ್ಯಕ” ಎಂದರು.

ಸಮಾರೋಪ ನುಡಿಗಳನ್ನಾಡಿದ ಹಿರಿಯ ವಿದ್ವಾಂಸ ನಾ. ಗೀತಾಚಾರ್ಯ ಅವರು, ದೇಶದಲ್ಲೇ ಹಸ್ತಪ್ರತಿಗಳ ಸಂಗ್ರಹ–ಅಧ್ಯಯನ ನಡೆಸಿ ಸಮ್ಮೇಳನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ; ಈ ಕ್ಷೇತ್ರದಲ್ಲಿ ಅದು ಏಕೈಕ ವಿಶ್ವವಿದ್ಯಾಲಯವೆಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಿ.ವಿ. ಪರಮಶಿವಮೂರ್ತಿ, ಹಸ್ತಪ್ರತಿ ಸಂಗ್ರಹದ ಸಂದರ್ಭದಲ್ಲಿ ಬಾಗಲಕೋಟೆ–ಮುಳಗಡೆ ಪ್ರದೇಶಗಳಲ್ಲಿ ಸಂಚರಿಸಿದ ಅನುಭವಗಳನ್ನು ಹಂಚಿಕೊಂಡರು. “ಹಸ್ತಪ್ರತಿಗಳು ಸಾಂಸ್ಕೃತಿಕವಾಗಿಯೂ ಮಾನಸಿಕವಾಗಿಯೂ ನಮ್ಮಲ್ಲಿ ಜ್ಞಾನವನ್ನು ಜಾಗೃತಿಗೊಳಿಸುತ್ತವೆ. ಯುವಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಹಸ್ತಪ್ರತಿ ಅಧ್ಯಯನದಲ್ಲಿ ತೊಡಗಬೇಕು. ಕಳೆದ 34 ವರ್ಷಗಳಿಂದ ಹಸ್ತಪ್ರತಿ ಕ್ಷೇತ್ರದ ಪುನರುಜ್ಜೀವನಕ್ಕೆ ವಿಶ್ವವಿದ್ಯಾಲಯ ನಿರಂತರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಹಸ್ತಪ್ರತಿ ಸಮ್ಮೇಳನ ನಡೆಸುವ ಏಕೈಕ ವಿಶ್ವವಿದ್ಯಾಲಯ ನಮ್ಮದೇ” ಎಂದರು.

ಅತಿಥಿಗಳಾಗಿ ಮಾತನಾಡಿದ ಹಡಲಗೇರಿ ಸ.ಪ್ರ.ದ. ವಸತಿಯುಕ್ತ ಕಾಲೇಜಿನ ಪ್ರಾಂಶುಪಾಲರಾದ ಶರಣಗೌಡ ಪಾಟೀಲ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ನಿರಂತರ ಕನ್ನಡ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವೀರೇಶ ಬಡಿಗೇರ ಹಾಗೂ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಅರುಣಕುಮಾರ ಗಾಳಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಪ್ರಮಾಣಪತ್ರ ವಿತರಣೆ:

ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿದ ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಗಮನಸೆಳೆದ ಹಸ್ತಪ್ರತಿ ಪ್ರದರ್ಶನ:

ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಹಸ್ತಪ್ರತಿ ಪ್ರದರ್ಶನ ಸಂಶೋಧಕರು, ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳ ಗಮನ ಸೆಳೆಯಿತು. ವಿವಿಧ ಬಗೆಯ ಹಸ್ತಪ್ರತಿಗಳ ಮೂಲಕ ಪಾರಂಪರಿಕ ಜ್ಞಾನ, ಸಂಪ್ರದಾಯಗಳು, ಸಾಂಸ್ಕೃತಿಕ ಆಯಾಮಗಳು ಹಾಗೂ ವಿಭಿನ್ನ ಶಾಸ್ತ್ರಗಳ ಕುರಿತು ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದರು.

ಕಾಮೆಂಟ್‌ಗಳು