ಪ್ರತಿ ವರ್ಷ ಜ. ೨೬ ರಂದು ದೇಶದ ಜನತೆ ಗಣರಾಜ್ಯೋತ್ಸವವನ್ನು ಅತ್ಯಂತ ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸುತ್ತಿದೆ. ೧೯೫೦ರ ಜ. ೨೬ ರಂದು ಭಾರತದ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿದ್ದು, ಆ ದಿನದಿಂದ ಭಾರತ ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣತಂತ್ರ ರಾಷ್ಟ್ರವಾಯಿತು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಸೋಮವಾರ ತಾಲೂಕಾಡಳಿತದ ವತಿಯಿಂದ ನಗರದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ೭೭ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದು, ಬಡತನ ನಿರ್ಮೂಲನೆಗೆ ಈ ಯೋಜನೆಗಳು ಮಹತ್ತರ ಸಹಕಾರಿಯಾಗಿವೆ ಎಂದರು.
ತಮ್ಮ ಮತಕ್ಷೇತ್ರದಲ್ಲಿ ಕೆರೂರು ಏತ ನೀರಾವರಿ ಯೋಜನೆ ಹಾಗೂ ಬಾಳೆಕುಂದ್ರಿ ಕಾಲುವೆ ಯೋಜನೆಗಳು ಅನ್ನದಾತ ರೈತರಿಗೆ ಅಪಾರ ಅನುಕೂಲ ಕಲ್ಪಿಸಿವೆ. ಕಾಂಗ್ರೆಸ್ ಪಕ್ಷದ ಶ್ರಮದಿಂದಲೇ ಈ ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದು, ರೈತರ ಬದುಕು ಹಸನಾಗಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೆಗಾ) ಕಾಯ್ದೆಯನ್ನು ಕೇಂದ್ರ ಸರ್ಕಾರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಇದರಿಂದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕುಂಠಿತವಾಗುವ ಭೀತಿ ಉಂಟಾಗಿದೆ. ಮನರೆಗಾ ಕಾಯ್ದೆ ತಿದ್ದುಪಡಿಯಿಂದ ಗ್ರಾಮಗಳ ಪ್ರಗತಿಗೆ ಧಕ್ಕೆಯಾಗಲಿದೆ ಎಂದು ಅವರು ಕೇಂದ್ರ ಸರ್ಕಾರದ ನೀತಿಗೆ ವಿರೋಧ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಇದು ನಮ್ಮ ಸರ್ಕಾರದ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಬಡವರಿಗೆ ಹಕ್ಕುಪತ್ರ, ನಿರ್ಗತಿಕರಿಗೆ ಮನೆಗಳನ್ನು ನೀಡಿ ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದು ಅವರು ಹೇಳಿದರು.
ಇತ್ತೀಚೆಗೆ ನಗರದಲ್ಲಿ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ವೃತ್ತಕ್ಕೆ ಶಿಲಾನ್ಯಾಸ ನೆರವೇರಿಸಿ ಬಹುದಿನಗಳ ಕನಸನ್ನು ಈಡೇರಿಸಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಮತಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ತಹಶೀಲ್ದಾರ್ ಎಸ್. ಎಫ್. ಬೊಮ್ಮಣ್ಣವರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ಹಿರಿಯರ ಪರಿಶ್ರಮದಿಂದ ದೊರೆತಿರುವ ಸಹೋದರತ್ವ, ಸಮಾನತೆ ಮತ್ತು ಸಮಗ್ರತೆಯ ಮೌಲ್ಯಗಳನ್ನು ನಾವು ಅಳವಡಿಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕಿದೆ ಎಂದರು.
ಪೊಲೀಸ್, ಸ್ಕೌಟ್ ಮತ್ತು ಗೈಡ್ಸ್, ಮಾಜಿ ಸೈನಿಕರು, ಅಗ್ನಿಶಾಮಕ ದಳ, ಎನ್.ಸಿ.ಸಿ., ಹಾಗೂ ಶಾಲಾ ವಿದ್ಯಾರ್ಥಿಗಳ ಕವಾಯತು ನಡೆಯಿತು. ಬಳಿಕ ಶಾಲಾ ಮಕ್ಕಳ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಹಿರೇಮಠ, ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ಹನಮಂತ ನರಳೆ, ಬಿಇಒ ಕೇಶವ ಪೆಟ್ಲೂರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪಣ್ಣವರ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್. ಹಳಗೇರಿ, ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ಬಿಸಿಎಂ ಅಧಿಕಾರಿ ಹೇಮಲತಾ ಸಿಂಧೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
🔖
👉 ಸ್ಥಳೀಯ ಸುದ್ದಿಗಳಿಗಾಗಿ PetkarMedia Follow ಮಾಡಿ
#RepublicDay2026 #77ನೇಗಣರಾಜ್ಯೋತ್ಸವ#Badami #PetkarMedia#ಜನಪರಆಡಳಿತ #PanchGuarantee#ConstitutionOfIndia

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ