ಬಾಗಲಕೋಟೆ:ಚಾಲುಕ್ಯರ ನಾಡಿನಲ್ಲಿ ಗತವೈಭವದ ಸಂಭ್ರಮ : ಮೂರು ದಿನಗಳ ರಾಷ್ಟ್ರೀಯ ಚಾಲುಕ್ಯ ಉತ್ಸವ

ಬಾಗಲಕೋಟೆ: ಚಾಲುಕ್ಯರ ಗತಕಾಲದ ವೈಭವವನ್ನು ದೇಶಾದ್ಯಂತ ಸಾರುವ ಉದ್ದೇಶದಿಂದ ಜನವರಿ 19 ರಿಂದ 21ರವರೆಗೆ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಮೂರು ದಿನಗಳ ಕಾಲ ರಾಷ್ಟ್ರೀಯ ಚಾಲುಕ್ಯ ಉತ್ಸವ ಹಮ್ಮಿಕೊಳ್ಳಲಾಗಿದೆ. ಉತ್ಸವಕ್ಕೆ ಜನವರಿ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ತಿಳಿಸಿದ್ದಾರೆ.

Petkarmedia: ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ 

ಬಾದಾಮಿ ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಉತ್ಸವ ಆಯೋಜಿಸಲಾಗಿದ್ದು, ಚಾಲುಕ್ಯರ ಐತಿಹಾಸಿಕ ಪರಂಪರೆ, ಕಲೆ ಮತ್ತು ಸಂಸ್ಕೃತಿಯನ್ನು ಜನತೆಗೆ ಪರಿಚಯಿಸುವ ಉದ್ದೇಶ ಹೊಂದಿದೆ ಎಂದರು.

ಉತ್ಸವದ ಮೊದಲ ದಿನವಾದ ಜನವರಿ 19ರಂದು ಬಾದಾಮಿಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಸಚಿವರಾದ ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಉಪಸ್ಥಿತರಿರುವರು.

ಜನವರಿ 20ರಂದು ಪಟ್ಟದಕಲ್ಲಿನ ವಿಕ್ರಮಾದಿತ್ಯ ವೇದಿಕೆಯಲ್ಲಿ ನಡೆಯುವ ಎರಡನೇ ದಿನದ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉದ್ಘಾಟಿಸಲಿದ್ದು, ವಿವಿಧ ಸಚಿವರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಜನವರಿ 21ರಂದು ಐಹೊಳೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೂಡ ರಾಜ್ಯದ ಪ್ರಮುಖ ಸಚಿವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಉತ್ಸವದ ಮೊದಲ ದಿನ ಬಾದಾಮಿ ನಗರದ ರಾಮದುರ್ಗ ವೃತ್ತದ ಬಳಿ ಚಾಲುಕ್ಯ ವಂಶದ ಅಪ್ರತಿಮ ನಾಯಕ ಇಮ್ಮಡಿ ಪುಲಕೇಶಿಯ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡಿಗಲ್ಲು ಇಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಮೊದಲ ದಿನ – ಜನವರಿ 19 (ಬಾದಾಮಿ):

ಬೆಳಿಗ್ಗೆ 10 ಗಂಟೆಗೆ ಜಾನಪದ ಕಲಾತಂಡಗಳ ಮೆರವಣಿಗೆ, ಮಧ್ಯಾಹ್ನದಿಂದ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ ಓಡಿಸ್ಸಿ, ಮೋಹಿನಿಯಾಟ್ಟಂ, ಹಿಂದೂಸ್ಥಾನಿ ಸಂಗೀತ, ಹಾಸ್ಯ ಸಂಜೆ ಹಾಗೂ ರಾತ್ರಿ ಸಂಜೀತ್ ಹೆಗಡೆ ಅವರಿಂದ ಚಿತ್ರ ಸಂಗೀತ ಲಹರಿ.

ಎರಡನೇ ದಿನ – ಜನವರಿ 20 (ಪಟ್ಟದಕಲ್ಲು):

ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕುಚಿಪುಡಿ, ತೊಗಲು ಬೊಂಬೆಯಾಟ, ಜೋಗತಿ ದೀಪ ನೃತ್ಯ, ದೊಡ್ಡಾಟ, ಭರತನಾಟ್ಯ ಹಾಗೂ ರಾತ್ರಿ ಸಂಗೀತ ನಿರ್ದೇಶಕ ಅರ್ಜುನ ಜನ್ಯ ತಂಡದಿಂದ ಚಿತ್ರ ಸಂಗೀತ ಲಹರಿ.

ಮೂರನೇ ದಿನ – ಜನವರಿ 21 (ಐಹೊಳೆ):

ಸಮೂಹ ನೃತ್ಯ, ಸುಗಮ ಸಂಗೀತ, ನೃತ್ಯ ರೂಪಕ, ಮ್ಯಾಜಿಕ್ ಶೋ, ಚಂಡೆ–ವಾಯೋಲಿನ್, ಸ್ಯಾಕ್ಸೋಫೋನ್ ಕಾರ್ಯಕ್ರಮಗಳು ಹಾಗೂ ರಾತ್ರಿ ನಟ ಡಾಲಿ ಧನಂಜಯ ಮತ್ತು ರಘು ದೀಕ್ಷಿತ್ ತಂಡದಿಂದ ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮ ಜರುಗಲಿದೆ.

ಚಾಲುಕ್ಯರ ಇತಿಹಾಸ ಮತ್ತು ಸಂಸ್ಕೃತಿಯನ್ನು ಜೀವಂತಗೊಳಿಸುವ ಈ ಮಹತ್ವದ ಉತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮನವಿ ಮಾಡಿದರು.

#ರಾಷ್ಟ್ರೀಯಚಾಲುಕ್ಯಉತ್ಸವ#ChalukyaFestival2026#BagalkotNews#Badami#Pattadakal#Aihole#KarnatakaCulture#KannadaCulture#HeritageOfKarnataka#ChalukyaVaibhava#CulturalFestival#Siddaramaiah#TourismKarnataka#IndianHeritage#Petkarmedia

ಕಾಮೆಂಟ್‌ಗಳು