ಬಾದಾಮಿ: ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಈ ಅವಧಿಯಲ್ಲೇ ರಾಜ್ಯ ಸರ್ಕಾರ ೨ ಸಾವಿರ ಕೋಟಿ ರೂ.ಗಳನ್ನು ಒದಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯ ಇಮ್ಮಡಿ ಪುಲಕೇಶಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಿ ಮುಖ್ಯಮಂತ್ರಿಗಳು ಮಾತನಾಡಿದರು.
ಕೆರೂರು ಏತನೀರಾವರಿ ಯೋಜನೆಗೆ ೧೪೦೦ ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಬಾದಾಮಿ, ಕೆರೂರು ಸೇರಿದಂತೆ ೨೮ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟು ೫೪೦ ಕೋಟಿ ರೂ.ಗಳಿಗೂ ಅಧಿಕ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಬಾದಾಮಿ ಮಾತ್ರವಲ್ಲದೆ ಇತರೆ ಕ್ಷೇತ್ರಗಳ ಅಭಿವೃದ್ಧಿಗೂ ಅನುದಾನ ಒದಗಿಸಲಾಗುವುದು. ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ೫೯೨ ಭರವಸೆಗಳನ್ನು ನೀಡಿದ್ದೇವೆ. ಈ ಪೈಕಿ ೨೪೩ ಯೋಜನೆಗಳು ಈಡೇರಿವೆ. ಉಳಿದ ಭರವಸೆಗಳನ್ನೂ ನಿಶ್ಚಿತವಾಗಿ ಈಡೇರಿಸಲಾಗುವುದು ಎಂದು ಹೇಳಿದರು.
ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ
೨೦೧೮ರಲ್ಲಿ ನಾನು ಐದು ಬಾರಿ ಶಾಸಕನಾಗಿದ್ದ ಚಾಮುಂಡಿ ಕ್ಷೇತ್ರ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಚಾಮುಂಡಿ ಕ್ಷೇತ್ರದಲ್ಲಿ ಸೋಲು ಕಂಡರೂ ಬಾದಾಮಿ ಕ್ಷೇತ್ರದ ಜನ ನನ್ನ ಕೈ ಹಿಡಿದರು. ಅದರಿಂದಾಗಿಯೇ ೨೦೨೩ರಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಈ ಕ್ಷೇತ್ರದ ಜನರನ್ನು ನಾನು ಎಂದಿಗೂ ಮರೆಯಲಾರೆ ಎಂದು ಸಿಎಂ ಸ್ಮರಿಸಿದರು.
ಶಾಸಕನಾಗಿದ್ದ ಅವಧಿಯಲ್ಲಿ ಚಾಲುಕ್ಯ ಉತ್ಸವ ನಡೆಸಲು ಸಾಧ್ಯವಾಗದೇ ಉಳಿದಿದ್ದು ಬೇಸರದ ಸಂಗತಿ. ಇಮ್ಮಡಿ ಪುಲಕೇಶಿ ಮಹಾರಾಜರ ಮೂರ್ತಿ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ್ದು, ಅದಕ್ಕಾಗಿ ಅಗತ್ಯ ಅನುದಾನವನ್ನೂ ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಚಾಲುಕ್ಯ ಉತ್ಸವ ಆಯೋಜನೆ ಕುರಿತು ತಾವು, ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಮುಖ್ಯಮಂತ್ರಿಗಳನ್ನು ಮನವಿ ಮಾಡಿದಾಗ ಸಿಎಂ ಒಂದೇ ಮಾತಿನಲ್ಲಿ ಒಪ್ಪಿಗೆ ನೀಡಿದರು. ಈ ಭಾಗದ ಬಗ್ಗೆ ಅವರಿಗೆ ಅಪಾರ ಅಭಿಮಾನವಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಸಿಎಂ ಮಾತೃಹೃದಯ ಹೊಂದಿದ್ದಾರೆ. ಯುಕೆಪಿ ಬಾಧಿತ ಭೂಮಿಗೆ ಏಕರೂಪ ದರ ನಿಗದಿಪಡಿಸಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅನುಮೋದನೆ ನೀಡಿ ಅನುದಾನ ಒದಗಿಸಿದ್ದಾರೆ. ರನ್ನ ಹಾಗೂ ಚಾಲುಕ್ಯ ಉತ್ಸವಗಳು ದಶಕದ ಬಳಿಕ ನಡೆಯಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.
ಬಾದಾಮಿ ಅಭಿವೃದ್ಧಿಗೆ ೫೪೦ ಕೋಟಿ: ಚಿಮ್ಮನಕಟ್ಟಿ
ಪ್ರಾಸ್ತಾವಿಕವಾಗಿ ಮಾತನಾಡಿದ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಚಕ್ರವರ್ತಿಯನ್ನು ಸೋಲಿಸಿದ ಕೀರ್ತಿ ಇಮ್ಮಡಿ ಪುಲಕೇಶಿಗೆ ಸಲ್ಲುತ್ತದೆ ಎಂದರು. ಬಾದಾಮಿಯ ಗುಹಾಲಯಗಳ ಅಭಿವೃದ್ಧಿಗೆ ೮೪ ಕೋಟಿ ರೂ.ಗಳ ಮಾಸ್ಟರ್ ಪ್ಲಾನ್ ಸಿದ್ಧವಾಗಿದ್ದು, ರಾಜ್ಯ ಸರ್ಕಾರದಿಂದ ಅನುಮೋದನೆ ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಮನವಿ ಮಾಡಿದರು.
ಈವರೆಗೆ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ೫೪೦ ಕೋಟಿ ರೂ.ಗಳನ್ನು ನೀಡಿದೆ. ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕೆರೂರು ಏತನೀರಾವರಿ ಯೋಜನೆಗೆ ೧೪೦೦ ಕೋಟಿ ರೂ.ಗಳನ್ನು ನೀಡಲು ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನೂ ಅವರು ಉಲ್ಲೇಖಿಸಿದರು.
#ಬಾದಾಮಿಚಾಲುಕ್ಯಉತ್ಸವ#ಬಾದಾಮಿ_ಅಭಿವೃದ್ಧಿ#೨ಸಾವಿರಕೋಟಿ#ಕೆರೂರುಏತನೀರಾವರಿ#ಕುಡಿಯುವನೀರಿನಯೋಜನೆ#ರಸ್ತೆಅಭಿವೃದ್ಧಿ#ಇಮ್ಮಡಿಪುಲಕೇಶಿ#ಸಿದ್ದರಾಮಯ್ಯ
#ಭೀಮಸೇನಚಿಮ್ಮನಕಟ್ಟಿ
#ಆರ್‌ಬಿ_ತಿಮ್ಮಾಪೂರ
#ಶಿವರಾಜತಂಗಡಗಿ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ