ಬಾಗಲಕೋಟೆ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಲಾಭಾರ್ಥಿಗಳ ಸಂಖ್ಯೆ ಏರಿಕೆ

ಬಾಗಲಕೋಟೆ :ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ೪,೧೧,೫೮೨ ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ತಿಳಿಸಿದ್ದಾರೆ.

Petkarmedia:ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ

ಪ್ರಕಟಣೆಯಲ್ಲಿ ಅವರು ವಿವರಿಸಿದಂತೆ, ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುವ ಉದ್ದೇಶದಿಂದ ರಾಜ್ಯ ಸರಕಾರವು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ೨೦೦೦ ರೂ. ಮಾಹೆಯಾನ ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ೨೦೨೩ರ ಜೂನ್ ೬ರಂದು ಜಾರಿಗೆ ತಂದಿದೆ. ಆರಂಭದಲ್ಲಿ ಆಗಸ್ಟ್–೨೦೨೩ರ ಮಾಹೆಯಲ್ಲಿ ೩,೫೮,೨೮೫ ಫಲಾನುಭವಿಗಳಿದ್ದರೆ, ಸೆಪ್ಟೆಂಬರ್–೨೦೨೫ಕ್ಕೆ ೪,೧೧,೫೮೨ ಫಲಾನುಭವಿಗಳಾಗಿದ್ದಾರೆ. ಸೆಪ್ಟೆಂಬರ್–೨೦೨೫ರ ಮಾಹೆಗೆ **ಒಟ್ಟು ೮೨.೩೧ ಕೋಟಿ ರೂ.**ಗಳನ್ನು ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆ ಆರಂಭದಿಂದ ಇಂದಿನವರೆಗೆ ಜಿಲ್ಲೆಗೆ ೨೪ ಕಂತುಗಳಲ್ಲಿ ೧೯೦೧.೨೩ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಫೆಬ್ರವರಿ ಮತ್ತು ಮಾರ್ಚ್–೨೦೨೫ರ ಮಾಹೆಯ ಹಣ ತಾಂತ್ರಿಕ ಕಾರಣಗಳಿಂದ ಜಮೆ ಆಗಿಲ್ಲ; ಬಿಡುಗಡೆಗೊಂಡ ತಕ್ಷಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಈ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ, ಗೃಹಲಕ್ಷ್ಮೀ ಯೋಜನೆಯಡಿ ಕೆಲ ಫಲಾನುಭವಿಗಳು ಎದುರಿಸುತ್ತಿರುವ ಐಟಿ ಮತ್ತು ಜಿಎಸ್‌ಟಿ ಸಂಬಂಧಿತ ಸಮಸ್ಯೆಗಳ ಕುರಿತು, ತಾವು ತೆರಿಗೆ ಪಾವತಿದಾರರು ಅಲ್ಲವೆಂಬ ಪ್ರಮಾಣಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಕಚೇರಿಗಳಿಗೆ ಸಲ್ಲಿಸಬೇಕು. ಪ್ರಧಾನ ಕಚೇರಿ ಹಂತದಲ್ಲಿ ಪರಿಶೀಲನೆಯ ಬಳಿಕ ಸಮಸ್ಯೆಗಳು ಬಗೆಹರಿಯಲಿವೆ. ಯೋಜನೆಗೆ ಸಂಬಂಧಿಸಿದ ಸಹಾಯವಾಣಿ ಸ್ಥಾಪಿಸಲ್ಪಟ್ಟಿದ್ದು, ಸಹಾಯವಾಣಿ ಸಂಖ್ಯೆ ೧೮೧ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು