ಬಾಗಲಕೋಟೆಯ ಮೋಟಗಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ

ಉತ್ತರ ಕರ್ನಾಟಕದಲ್ಲಿ ಜಾತ್ರೆಗಳ ಸಂಭ್ರಮ ಎಂದರೆ ಅದು ಕೇವಲ ಹಬ್ಬವಲ್ಲ, ಬದುಕಿನ ಭಾಗ. ಬನದ ಹುಣ್ಣಿಮೆಯಂದು ಆರಂಭಗೊಳ್ಳುವ ಬಾದಾಮಿ ಬನಶಂಕರಿ ಜಾತ್ರೆಯಿಂದ ಹಿಡಿದು ಮೇ ತಿಂಗಳವರೆಗೂ ಈ ನಾಡಿನಲ್ಲಿ ಜಾತ್ರೆಗಳ ಸರಣಿ ನಿರಂತರವಾಗಿ ಸಾಗುತ್ತದೆ. 

ಅದರಲ್ಲೂ ಭಾರತ ಹುಣ್ಣಿಮೆ ಉತ್ತರ ಕರ್ನಾಟಕದ ಜಾತ್ರಾ ಸಂಸ್ಕೃತಿಗೆ ಅಗ್ರಸ್ಥಾನ ಪಡೆದ ಪರ್ವಕಾಲ. ಈಪವಿತ್ರ ದಿನದಂದು ಬಾಗಲಕೋಟೆ ನಗರದ ಆದಿದೇವತೆಯಾಗಿ ಪೂಜೆಗೊಳ್ಳುವ ಮೋಟಗಿ ಶ್ರೀ ಬಸವೇಶ್ವರ ದೇವಸ್ಥಾನ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಜಾತಿ–ಮತ–ಕುಲ ಬೇಧವಿಲ್ಲದೆ ಸಾವಿರಾರು ಭಕ್ತರು ಈ ಊರ ಜಾತ್ರೆಯಲ್ಲಿ ಭಾಗವಹಿಸುವುದು ಇದರ ವೈಶಿಷ್ಟ್ಯ.

ಊರ ಹಬ್ಬದ ವೈಶಿಷ್ಟ್ಯ

ಸುಂದರವಾಗಿ ಅಲಂಕರಿಸಲ್ಪಟ್ಟ ಭವ್ಯ ರಥದ ಮೆರವಣಿಗೆ, ಎತ್ತುಗಳ ಪ್ರದರ್ಶನ ಹಾಗೂ ಮಾರಾಟ, ಅನ್ನ ಸಂತರ್ಪಣೆ (ದಾಸೋಹ), ಸಾಂಸ್ಕೃತಿಕ ಕಾರ್ಯಕ್ರಮಗಳು – ಇವೆಲ್ಲವೂ ಈ ಜಾತ್ರೆಯನ್ನು ಕೇವಲ ಧಾರ್ಮಿಕ ಆಚರಣೆಯಲ್ಲದೆ ಜನೈಕ್ಯದ ಹಬ್ಬವನ್ನಾಗಿ ರೂಪಿಸಿವೆ. ಹಿಂದಿನ ದಿನಗಳಲ್ಲಿ ಒಂಭತ್ತು ದಿನಗಳವರೆಗೆ ನಡೆಯುತ್ತಿದ್ದ ಈ ಜಾತ್ರೆ, ಇಂದಿನ ಕಾಲಘಟ್ಟದಲ್ಲಿ ಒಂದು ದಿನದ ಮಹೋತ್ಸವವಾಗಿ ಆಚರಿಸಲ್ಪಡುತ್ತಿದೆ.

ಮೋಟಗಿ ಮನೆತನ – ದೇವಾಲಯದ ಅಡಿಪಾಯ

ಮೋಟಗಿ ಶ್ರೀ ಬಸವೇಶ್ವರ ದೇವಾಲಯದ ಇತಿಹಾಸದಲ್ಲಿ ಮೋಟಗಿ ಮನೆತನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಲಿಂಗಪ್ಪ ಮೋಟಗಿಯವರು ಬಸವೇಶ್ವರನ ವಿಗ್ರಹವನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದರು. ಅವರು ಸ್ಥಾಪಿಸಿದ ಈ ದೇವಾಲಯವೇ ಇಂದು ಊರಿನ ಆದಿದೇವತೆಯಾಗಿ ಪೂಜೆಗೊಳ್ಳುತ್ತಿದೆ.

ಬೆಣ್ಣೂರ ಮನೆತನದವರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದು, ಬಾಗೇವಾಡಿ, ಜಿಗಜಿನ್ನಿ ಹಾಗೂ ಬಾಳಿಕಾಯಿ ಮನೆತನಗಳು ಜಾತ್ರೆಯ ಬಾಬುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಂಗಾರ ಗಟ್ಟಿ ಬಸವಣ್ಣ – ಪವಾಡದ ಕಥೆ

ಲಿಂಗಪ್ಪ ಮೋಟಗಿಯವರು ಮಸಾಲೆ ವ್ಯಾಪಾರಕ್ಕಾಗಿ ಹಳ್ಳಿಹಳ್ಳಿಗೆ ಸಂಚರಿಸುತ್ತಿದ್ದರು. ಅವರ ಎತ್ತು ಕೇವಲ ಸಾಗಣೆ ಸಾಧನವಲ್ಲ; ಅದು ಅವರ ರಕ್ಷಕ ಮತ್ತು ಮಾರ್ಗದರ್ಶಿ. ಒಂದು ಸಂದರ್ಭದಲ್ಲಿ ಬಾಗಲಕೋಟೆ ಹೊರವಲಯದಲ್ಲಿ ಬಿಡಾರ ಹೂಡಿದಾಗ, ಎತ್ತು ನೆಲವನ್ನು ಕದರತೊಡಗಿತು. ಅದನ್ನು ಅನುಸರಿಸಿ ತೋಡಿದಾಗ, ಹಂಡೆಗಟ್ಟಲೆ ಬಂಗಾರ ದೊರೆಯಿತು.

ಈ ಪವಾಡದಿಂದ ಜನಮನದಲ್ಲಿ ಆ ಎತ್ತು “ಬಂಗಾರ ಗಟ್ಟಿ ಬಸವಣ್ಣ” ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು.

ರಥೋತ್ಸವ – ಭಕ್ತಿಯ ಶಿಖರ ಕ್ಷಣ

ಭಾರತ ಹುಣ್ಣಿಮೆಯ ದಿನದಂದು ನಡೆಯುವ ಶ್ರೀ ಬಸವೇಶ್ವರ ರಥೋತ್ಸವ ಜಾತ್ರೆಯ ಪ್ರಮುಖ ಆಕರ್ಷಣೆ. ಸುಮಾರು 80 ಅಡಿ ಎತ್ತರದ ಸಾಗವಾಣಿ ಕಟ್ಟಿಗೆಯಿಂದ ನಿರ್ಮಿತ ಭವ್ಯ ತೇರು, ಕಲಾತ್ಮಕ ಚಿತ್ತಾರ, ಗೊಂಬೆಗಳ ಅಲಂಕಾರ, ಗಂಟೆ–ಪತಾಕೆಗಳ ಶೋಭೆ – ಎಲ್ಲವೂ ಭಕ್ತರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ರಥೋತ್ಸವಕ್ಕೆ ದೂರದೂರಿನಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಇಂದಿನ ಸವಾಲು – ನಾಳೆಯ ಕನಸು

ಕೃಷ್ಣಾ ನದಿಯ ಮಡಿಲಿಗೆ ಬಾಗಲಕೋಟೆಯ ಭಾಗಶಃ ವಿಲೀನದಿಂದಾಗಿ, ಶತಮಾನಗಳ ಇತಿಹಾಸವಿರುವ ಈ ಜಾತ್ರೆ ಇಂದಿಗೆ ಒಂದು ದಿನಕ್ಕೆ ಸೀಮಿತವಾಗಿದೆ. ಆದರೆ ನವನಗರದಲ್ಲಿ ಭವ್ಯವಾದ ಮೋಟಗಿ ಬಸವೇಶ್ವರ ದೇವಸ್ಥಾನ ನಿರ್ಮಿಸಿ, ಮುಂದಿನ ವರ್ಷಗಳಲ್ಲಿ ಜಾತ್ರೆಯನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸುವ ಸಂಕಲ್ಪ ಜಾತ್ರಾ ಸಮಿತಿಯಲ್ಲಿದೆ.

ಭಕ್ತರಿಗೆ ಆಹ್ವಾನ

ಭಕ್ತಿ, ಇತಿಹಾಸ ಮತ್ತು ಜನೈಕ್ಯದ ಸಂಗಮವಾದ ಮೋಟಗಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, ಶ್ರೀ ಬಸವೇಶ್ವರನ ಕೃಪೆಗೆ ಪಾತ್ರರಾಗೋಣ.

Petkarmedia: ರಥೋತ್ಸವದ ಕಡತ ಚಿತ್ರ.

ಲೇಖನ:✍️ ಮಹಾಬಳೇಶ್ವರ ಎಸ್. ಗುಡಗುಂಟಿ, ಬಾಗಲಕೋಟ

ಕಾಮೆಂಟ್‌ಗಳು