ಬಾಗಲಕೋಟೆ : ಪ್ರತಿಯೊಬ್ಬ ಮನುಷ್ಯ, ನಿಮ್ಮ ನಿಧನದ ಅಂತರ, ದೇಹದ ಪ್ರಮುಖ ಅಂಗಾಂಗಳ ದಾನಕ್ಕೆ ಮುಂದಾಗಬೇಕು. ಅದರಲ್ಲೂ ನೇತ್ರ ದಾನದ ಮೂಲಕ ಅಂಧರ ಬಾಳಿಗೆ ಬೆಳಕಾಗಲು ನಾವೆಲ್ಲ ದೃಢ ಸಂಕಲ್ಪ ಮಾಡೋಣ ಎಂದು ನಗರದ ಧನುಷ್ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ನಿರ್ದೇಶಕಿ ಹಾಗು ಲಯನ್ಸ ಕ್ಲಬ್‌ನ ಡಾ.ಭಾಗ್ಯ ಪಾಟೀಲ ಹೇಳಿದರು.
ನಗರದ ಸಿ.ವಿ. ಅಥಣಿ ಕಲ್ಯಾಣ ಮಂಟಪದಲ್ಲಿ ಲಯನ್ಸ ಕ್ಲಬ್, ಬಿವಿವಿ ಸಮಘದ ನೇತ್ರ ಭಂಡಾರ ಮತ್ತು ಪಾರದರ್ಶಕ ಪಟಲ ಜೋಡಣಾ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೇತ್ರದಾನ ಹಾಗೂ ಅಂಗಾಂಗ ದಾನಗಳ ಮಹತ್ವ, ಸ್ವಯಂ ಪ್ರೇರಿತ ನೋಂದಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಮ್ಮ ದೇಶ, ರಾಜ್ಯದಲ್ಲಿ ಸಾವಿರಾರು ಜನರು, ಕಣ್ಣಿಲ್ಲದೇ ಜೀವನ ನಡೆಸುತ್ತಿದ್ದಾರೆ. ಅವರ ಬಳಿ ಹಲವು ರೀತಿಯ ಪ್ರತಿಭೆ ಇದ್ದರೂ, ಕಣ್ಣಿಲ್ಲದೇ ಬಾಳು ಕತ್ತಲಾಗಿರುತ್ತದೆ. ಅಂತಹವರ ಬಾಳಿಗೆ ಬೆಳಕಾಗಲು ನೇತ್ರ ದಾನ ಅವಶ್ಯವಿದೆ. ಪ್ರತಿದಿನ ನೂರಾರು ಜನರು, ವಿವಿಧ ಕಾರಣಕ್ಕೆ ನಿಧನರಾಗುತ್ತಾರೆ. ಆದರೆ, ಮೂಢ ನಂಬಿಕೆ ಅಥವಾ ಮತ್ಯಾವುದೇ ಕಾರಣದಿಂದ ಅಂಗಾಂಗ ದಾನ ಮಾಡಲು ಮುಂದೆ ಬರುವುದಿಲ್ಲ ಎಂದರು.
ಮನುಷ್ಯನ ದೇಹದಲ್ಲಿ ಇರುವ ಕೆಲವು ಪ್ರಮುಖ ಅಂಗಾಂಗ ದಾನದಿಂದ ಬೇರೊಬ್ಬರ ಬದುಕು ಹಸನಾಗುತ್ತದೆ. ನಾವೆಲ್ಲ, ನಿಧನದ ಬಳಿಕ ಪರೋಪಕಾರಿಯಾಗಲು, ಮತ್ತೊಬ್ಬರ ಜೀವನಕ್ಕೆ ಬೆಳಕಾಲು ಅಂಗಾಂಗ ದಾನ ಮಾಡಬೇಕು. ಈ ನಿಟ್ಟಿನಲ್ಲಿ ಲಯನ್ಸ ಕ್ಲಬ್‌ನಿಂದ ನೇತ್ರದಾನ ಹಾಗೂ ಅಂಗಾಂಗ ದಾನದ ಕುರಿತು ಜಾಗೃತಿ, ನೋಂದಣಿ ಕಾರ್ಯಕ್ರಮ ನಡೆಸುತ್ತಿರುವುದು ಸಮಾಜಮುಖಿ ಕಾರ್ಯಕ್ರಮ. ಇದರ ಪ್ರಯೋಜನ ಪ್ರತಿಯೊಬ್ಬರೂ ಪಡೆಯಬೇಕು ಎಂದು ಸಲಹೆ ನೀಡಿದರು.
ಬಿವಿವಿ ಸಂಘದ ಎಸ್.ಎನ್.ಎಂ.ಸಿ ವೈದ್ಯಕೀಯ ಕಾಲೇಜನ ನೇತ್ರತಜ್ಞೆ ಡಾ।ಜಯಶ್ರೀ ನಾಗಾವಿ ಮಾತನಾಡಿ, ನೇತ್ರದ ಬಗ್ಗೆ ಹಾಗೂ ನೇತ್ರದಾನದ ಮಹತ್ವ, ಮರಣದ ನಂತರ ಅದನ್ನು ಪಡೆದುಕೊಳ್ಳುವ ರೀತಿ ಕುರಿತು ವಿವರಿಸಿದರು.
ನೇತ್ರದಾನದಿಂದ ನಾವು, ಓರ್ವ ಅಂಧರ ಬಾಳಿಗೆ ಬೆಳಕು ನೀಡಬಹುದು. ಪ್ರತಿಯೊಬ್ಬರೂ ತಮ್ಮ ನಿಧನದ ಬಳಿಕ ನೇತ್ರ ದಾನಕ್ಕೆ ಮುಂದಾಗಬೇಕು ಎಂದು ಕೋರಿದರು.
ಹಿರಿಯ ನೇತೃತಜ್ಞ, ಲಯನ್ ಡಾ।ಲಿಂಗರಾಜ ಚಂದರಗಿ, ಪ್ರತಿಯೊಬ್ಬರೂ ನೇತ್ರ ದಾನ ಮಾಡಲು ಮುಂದೆ ಬರಬೇಕು ಎಂದರು.
ಇದೇ ವೇಳೆ ಸುಮಾರು 45 ಜನ ನೇತ್ರದಾನ ಮಾಡಲು ಹೆಸರು ನೋಂದಾಯಿಸಿದರು. ಅದೇ ರೀತಿ ಅಂಗಾಂಗ ದಾನಗಳ ಮಹತ್ವದ ಬಗ್ಗೆ ಎಸ್.ಎನ್.ಎಂ.ಸಿ. ವೈದ್ಯಕೀಯ ಮಹಾವಿದ್ಯಾಲಯದ ಮೂತ್ರಪಿಂಡ ರೋಗ ತಜ್ಞ ಡಾ।ಚಿರಾಗ್ ವಿವರಿಸಿ, ನಮ್ಮ ದೇಹದಲ್ಲಿನ ಎಂಟು ಮುಖ್ಯವಾದ ಅಂಗಗಳನ್ನು ನಾವು ದಾನ ಮಾಡಬಹುದು. ಕೆಲವೊಮ್ಮೆ ದುರದೃಷ್ಟ ದಿಂದ ವ್ಯಕ್ತಿಯು ಅಪಘಾತಕ್ಕೆ ಒಳಗಾದಾಗ ಹಾಗೂ ಗಾಯಗೊಂಡಾಗ ಮತ್ತು ಸಾವಿನ ಅಂಚಿನಲ್ಲಿರುವಾಗ ಹಾಗೂ ಸಾವನ್ನು ಗೆಲ್ಲಲಾರದ ಪರಿಸ್ಥಿತಿಯಲ್ಲಿ ಇರುವಾಗ ತನ್ನ ಕೆಲವು ಸದೃಡ ಅಂಗಗಳನ್ನು ತಮ್ಮ ಕುಟುಂಬದ ಒಪ್ಪಿಗೆಯ ಸಮೇತ ದಾನ ಮಾಡಬಹುದು ಎಂದು ವಿವರಿಸಿದರು.
ಅಂಗಾಂಗ ದಾನದಿಂದ ಒಂದು ಜೀವಕ್ಕೆ ಮರು ಜನ್ಮವನ್ನು ನೀಡಬಹುದು. ಎಲ್ಲರೂ ಅಂಗಾಂಗ ದಾನಗಳ ಬಗ್ಗೆ ವಿವರ ತಿಳಿದುಕೊಂಡು ತಮ್ಮ ಸುತ್ತಮುತ್ತಲಿನ ಜನರಿಗೂ ಕೂಡ ತಿಳಿಸಿ ಅಂತಹ ಕೆಲವು ಸಂದರ್ಭಗಳಲ್ಲಿ ಅಂಗಾಂಗ ದಾನ ಮಾಡಲು ಎಲ್ಲರೂ ಆಸಕ್ತಿ ತೋರಿಸಬೇಕೆಂದು ಆಗ್ರಹಿಸಿದರು.
ಲೈನ್ಸ್ ಕ್ಲಬ್ ಅಧ್ಯಕ್ಷ ಲಯನ್ ಡಿಂಕೇಶ ಬರಹನಪುರ, ಕಾರ್ಯದರ್ಶಿ ಸೂರಜ್ ಪಾಟೀಲ, ಖಜಾಂಚಿ ಚನ್ನಬಸು ದಂಡಿನ, ಎಂ.ಜೆ.ಎಫ್. ಡಾ।ರಾಘವೇಂದ್ರ ವನಕಿ ಉಪಸ್ಥಿತರಿದ್ದರು. ಮೀರಾ ಸಫಾರಿ ಪ್ರಾರ್ಥಿಸಿದರು. ಲಯನ್ಸ ಬ್ರಾಂಚ್ ಕ್ಲಬ್ ಅಧ್ಯಕ್ಷೆ ತೃಪ್ತಿ ದರ್ಬಾರ್ ಸ್ವಾಗತಿಸಿದರು. ದೀಪಾ ಶೀಲವಂತರ ವಂದಿಸಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆಯಲ್ಲಿನ ಸುಮಾರು 30ಕ್ಕೂ ಹೆಚ್ಚು ವಿವಿಧ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಲೈಯನ್ಸ ಸಂಸ್ಥೆಯ ಎಲ್ಲ ಸದಸ್ಯರು ಹಾಗೂ ಬ್ರಾಂಚ್ ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ