“ಕಾಯುವುದಕ್ಕಿಂತ ಮಾಡುವುದೇ ಶ್ರೇಷ್ಠ” – ಯುವಕರ ಶ್ರಮದಿಂದ ನಿಂತ ಬಸ್ ತಂಗುದಾನ

ಸರ್ಕಾರದ ಅನುದಾನದಿಂದಲೇ ಆಗಬೇಕು ಎಂಬ ಮನೋಭಾವನೆಗೆ ಪ್ರಶ್ನಾರ್ಥಕ ಚಿಹ್ನೆ ಹಾಕಿ, “ನಾವು ಮಾಡಿದರೆ ಸಾಧ್ಯ” ಎಂಬ ದೃಢ ನಂಬಿಕೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಯುವಕರು. ಯಾವುದೇ ಸರಕಾರಿ ಅನುದಾನ ಪಡೆಯದೇ, ತಮ್ಮ ಸ್ವಂತ ಹಣ ಮತ್ತು ಶ್ರಮದಿಂದ ಬಸ್ ತಂಗುದಾನ ನಿರ್ಮಿಸಿ, ಸಮಾಜಕ್ಕೆ ಪ್ರೇರಣೆಯಾದ ಮಾದರಿಯನ್ನು ನಿರ್ಮಿಸಿದ್ದಾರೆ.

Petkarmedia:ಬೇಲೂರು ಯುವಕರ ಶ್ರಮದಿಂದ ನಿಂತ ಬಸ್ ತಂಗುದಾನ

ಕಳೆದ 15–20 ವರ್ಷಗಳಿಂದ ಈ ಗ್ರಾಮದಲ್ಲಿ ಪ್ರಯಾಣಿಕರು ಮಳೆ–ಬಿಸಿಲಿನ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ, ಸಂಜೆ ವೇಳೆಗೆ ಈ ಜಾಗವು ಕುಡಕರ ಅಡ್ಡೆಯಾಗಿದ್ದು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಅಸಹಜ ಪರಿಸ್ಥಿತಿಯನ್ನು ಎದುರಿಸಬೇಕಾಗಿತ್ತು. ಈ ಸಮಸ್ಯೆಯನ್ನು ಕಣ್ಣಾರೆ ಕಂಡು ಮೌನವಾಗಿರದೇ, ಪರಿಹಾರಕ್ಕೆ ಕೈ ಹಾಕಿದವರು ಗ್ರಾಮದ ಜಾಗೃತ ಯುವಕರು.

“ಸಮಸ್ಯೆಗೆ ಪರಿಹಾರಕ್ಕಾಗಿ ಸದಾ ಸರಕಾರದತ್ತ ನೋಡುವುದಕ್ಕಿಂತ, ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡೋಣ” ಎಂಬ ಚಿಂತನೆಯೇ ಇವರ ಶಕ್ತಿ. ತಮ್ಮದೇ ಹಣವನ್ನು ಸೇರಿಸಿ, ಸಮಯ ಮೀಸಲಿಟ್ಟು, ಶ್ರಮದಾನ ಮಾಡಿ ಸುಸಜ್ಜಿತ ಬಸ್ ತಂಗುದಾನ ನಿರ್ಮಿಸಿದರು. ಇದರೊಂದಿಗೆ ಪ್ರಯಾಣಿಕರಿಗೆ ನೆಮ್ಮದಿ ದೊರಕಿದ್ದು, ಅಸಾಮಾಜಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ.

ಇಂದಿನ ದಿನಗಳಲ್ಲಿ ಸರಕಾರದ ಅನುದಾನವಿಲ್ಲದೇ ಕೆಲಸ ಸಾಧ್ಯವಿಲ್ಲ ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ ಬೇಲೂರ ಗ್ರಾಮದ ಯುವಕರು, ಸಹಕಾರ, ಇಚ್ಛಾಶಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆ ಇದ್ದರೆ ದೊಡ್ಡ ಕೆಲಸಗಳನ್ನೂ ಸಾಧಿಸಬಹುದು ಎಂಬುದನ್ನು ಕಾರ್ಯತಃ ತೋರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ಇದು ಪ್ರೇರಣೆಯಾಗಿದೆ.

ಸಮಾಜ ಬದಲಾಗಬೇಕು ಎಂದರೆ ಯಾರಾದರೂ ಬರಬೇಕು ಎಂದು ಕಾಯುವುದಲ್ಲ; ನಾವುಲೇ ಬದಲಾವಣೆಯಾಗಿ ನಿಲ್ಲಬೇಕು. ಬೇಲೂರ ಗ್ರಾಮದ ಯುವಕರ ಈ ಹೆಜ್ಜೆ, ಅದಕ್ಕೆ ಅತ್ಯುತ್ತಮ ಉದಾಹರಣೆ.

#ಯುವಶಕ್ತಿ#ಸ್ವಂತಶ್ರಮ#ಗ್ರಾಮಾಭಿವೃದ್ಧಿ#ಪ್ರೇರಣೆ#ಬೇಲೂರಯುವಕರು#ಸಾಮಾಜಿಕಹೊಣೆಗಾರಿಕೆ#ModelVillage#ChangeMakers

ಕಾಮೆಂಟ್‌ಗಳು