ತೇರದಾಳ:ತೇರದಾಳ ಶಾಸಕ ಸಿದ್ದು ಸವದಿ ಅವರಿಂದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಬೆಂಗಳೂರು:ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ತೇರದಾಳ ಮತಕ್ಷೇತ್ರದ ವಿವಿಧ ಜನಸಾಮಾನ್ಯ ಸಮಸ್ಯೆಗಳ ಕುರಿತು ತೇರದಾಳ ಶಾಸಕ ಸಿದ್ದು ಸವದಿ ಅವರು ಸರ್ಕಾರದ ಗಮನ ಸೆಳೆದರು.

ಚರ್ಚೆಯಲ್ಲಿ ಮಾತನಾಡಿದ ಅವರು, “ನಮ್ಮದು ಬಡವರ ಸರ್ಕಾರ ಎಂದು ಬಡಾಯಿಕೊಚ್ಚಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕಳೆದ ಮೂರು ವರ್ಷಗಳಿಂದ ಬಡವರಿಗೆ ಒಂದೇ ಒಂದು ಮನೆ ಕೂಡ ನೀಡಿಲ್ಲ. ಬಡವರಿಗೆ ಮನೆ ಇಲ್ಲದೆ ಅವರು ಬದುಕು ಕಟ್ಟಿಕೊಳ್ಳುವುದು ಹೇಗೆ? ಬಡಜನರು ಏನು ಅನ್ಯಾಯ ಮಾಡಿದ್ದಾರೆ?” ಎಂದು ಕಿಡಿಕಾರಿದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ, ಕುಡಿಯುವ ನೀರು, ರಸ್ತೆ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಅವರು, ಈ ಎಲ್ಲ ವಿಷಯಗಳಿಗೆ ತ್ವರಿತ ಹಾಗೂ ಪರಿಣಾಮಕಾರಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಇದೇ ವೇಳೆ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ವಸತಿ ಯೋಜನೆಗಳನ್ನು ತಕ್ಷಣವೇ ಜಾರಿಗೆ ತರಬೇಕು, ಅರ್ಹ ಫಲಾನುಭವಿಗಳಿಗೆ ನ್ಯಾಯ ಸಿಗುವಂತೆ ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಮತಕ್ಷೇತ್ರದ ಜನರ ಬದುಕಿಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ವಿಶೇಷ ಅಧಿವೇಶನವು ಕೇವಲ ಚರ್ಚೆಗೆ ಸೀಮಿತವಾಗದೆ, ಜನಪರ ತೀರ್ಮಾನಗಳಿಗೆ ವೇದಿಕೆಯಾಗಬೇಕು ಎಂಬ ನಿರೀಕ್ಷೆಯನ್ನು ಶಾಸಕ ಸಿದ್ದು ಸವದಿ ವ್ಯಕ್ತಪಡಿಸಿದರು.

ಕಾಮೆಂಟ್‌ಗಳು