ಗುಲಾಬಿ, ಗುಲಕನ್ ಸ್ವಾವಲಂಬನೆ: ಸುಮಿತ್ರಾ ಶ್ಯಾಂಡಗಿ ಕುಟುಂಬದ ಸಾಧನೆ

ಸತತ ಪರಿಶ್ರಮ, ಅಧ್ಯಯನ ಮನೋಭಾವ, ಇಷ್ಟಪಟ್ಟು ಮಾಡುವ ಕೆಲಸ ಹಾಗೂ ಕುಟುಂಬದ ಬೆಂಬಲ ಇದ್ದರೆ ಕೃಷಿಯಲ್ಲೂ ಸಮೃದ್ಧ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಮುಧೋಳ ತಾಲ್ಲೂಕಿನ ನಾಗರಾಳ ಗ್ರಾಮದ ರೈತ ಮಹಿಳೆ ಸುಮಿತ್ರಾ ಶ್ಯಾಂಡಗಿ ಅವರ ಕುಟುಂಬ ಜೀವಂತ ಉದಾಹರಣೆ.

ಗುಲಾಬಿ ಕೃಷಿ ಯಲ್ಲಿ ಸುಮಿತ್ರಾ ಕುಟುಂಬ

ಸುಮಿತ್ರಾ ಹಾಗೂ ಅವರ ಪತಿ ಮಹಾದೇವ ಶ್ಯಾಂಡಗಿ 9ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿದ್ದು, ಕೃಷಿಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ. ಸಮಗ್ರ ಕೃಷಿ ಪದ್ಧತಿ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮೂಲಕ ಇವರು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಈ ಕುಟುಂಬಕ್ಕೆ ಎರಡು ಎಕರೆ ಜಮೀನು ಇದ್ದು, ಅದರಲ್ಲಿ ಒಂದು ಎಕರೆ ಜವಳು ಭೂಮಿಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಉಳಿದ ಒಂದು ಎಕರೆಯಲ್ಲಿ ಸುಮಿತ್ರಾ ಅವರು ಗುಲಾಬಿ ಕೃಷಿ ಕೈಗೊಂಡು ಗಮನಾರ್ಹ ಲಾಭ ಪಡೆಯುತ್ತಿದ್ದಾರೆ. ಗುಲಕನ್ ತಯಾರಿಕೆಗೆ ಉಪಯೋಗವಾಗುವ ಮೀರಾ ಬ್ಲೂ ಹಾಗೂ ಬ್ಲಾಕ್ ಮ್ಯಾಜಿಕ್ ತಳಿಯ ಗುಲಾಬಿ ಹೂಗಳನ್ನು ಬೆಳೆಸಲಾಗುತ್ತಿದೆ.

ತೋಟಗಾರಿಕೆ ಇಲಾಖೆಯಿಂದ ಒಂದು ಜೇನು ಪೆಟ್ಟಿಗೆ ದೊರೆತಿದ್ದು, ಉತ್ಪಾದನೆಯಾದ ಗುಲಾಬಿ ಹೂಗಳಲ್ಲಿ ಅರ್ಧದಷ್ಟು ಗುಲಕನ್ ತಯಾರಿಕೆಗೆ ಬಳಸಲಾಗುತ್ತದೆ. ಉಳಿದ ಹೂಗಳನ್ನು ಮಾರಾಟ ಮಾಡಲಾಗುತ್ತದೆ. ಗುಲಾಬಿ ಹೂಗಳು, ಜೇನುತುಪ್ಪ ಹಾಗೂ ಕೆಂಪು ಕಲ್ಲುಸಕ್ಕರೆಯ ಸಂಯೋಜನೆಯಿಂದ ತಯಾರಾಗುವ ಗುಲಕನ್‌ಗೆ ‘ಆಶೀರ್ವಾದ್ ಗುಲಕನ್’ ಎಂಬ ಬ್ರ್ಯಾಂಡ್ ಹೆಸರು ಇಡಲಾಗಿದೆ. ವಾರಕ್ಕೆ ಸರಾಸರಿ 3 ಕೆ.ಜಿ ಗುಲಕನ್ ಉತ್ಪಾದನೆಯಾಗುತ್ತಿದ್ದು, ಪ್ರತಿ ಕೆ.ಜಿಗೆ ₹600 ದರದಲ್ಲಿ ಮಾರಾಟವಾಗುತ್ತಿದೆ. ಈ ಗುಲಕನ್ ಸವಿಯುವಾಗ ಜೇನು ಹಾಗೂ ಗುಲಾಬಿ ಎಸಳನ್ನು ತಿಂದ ಅನುಭವ ದೊರೆಯುತ್ತದೆ ಎನ್ನುವುದು ಗ್ರಾಹಕರ ಮೆಚ್ಚುಗೆ.

ಆರಂಭದಲ್ಲಿ ಮಾರಾಟ ಸವಾಲಾಗಿದ್ದರೂ, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಕೃಷಿ ಮೇಳಗಳಲ್ಲಿ ತಿರುಗಾಡಿ ಉತ್ಪನ್ನ ಪರಿಚಯ ಮಾಡಿದರು. ಇಂದು ಮೊಬೈಲ್ ಸಂಪರ್ಕದ ಮೂಲಕವೇ ಆರ್ಡರ್‌ಗಳು ಬರುತ್ತಿದ್ದು, ಗ್ರಾಹಕರೇ ತೋಟಕ್ಕೆ ಬಂದು ಖರೀದಿಸುತ್ತಿದ್ದಾರೆ.

ಗುಲಾಬಿಯ ಜೊತೆಗೆ ಸುಗಂಧರಾಜ, ಸೇವಂತಿ, ಬಿಳಿ ಸೇವಂತಿ ಹೂಗಳನ್ನೂ ಬೆಳೆಸಲಾಗುತ್ತಿದೆ. ಅಲ್ಲದೇ ಶೇಂಗಾ, ಬೆಳ್ಳುಳ್ಳಿ, ಉಳ್ಳಾಗಡ್ಡಿ, ಗಜ್ಜರಿ, ಮೂಲಂಗಿ, ಡ್ರ್ಯಾಗನ್ ಹಣ್ಣು, ಪಪ್ಪಾಯಿ ಹಾಗೂ ತೈವಾನ್ ಪಿಂಕ್ ತಳಿಯ 100 ಪೇರಲ ಗಿಡಗಳನ್ನು ನಾಟಿ ಮಾಡಲಾಗಿದ್ದು, ಮುಂದಿನ ವರ್ಷದಿಂದ ಉತ್ತಮ ಫಸಲು ನಿರೀಕ್ಷಿಸಲಾಗಿದೆ.

ಹೈನುಗಾರಿಕೆಯಲ್ಲೂ ಕುಟುಂಬ ಸಕ್ರಿಯವಾಗಿದ್ದು, ಮೂರು ಜವಾರಿ ಆಕಳು ಹಾಗೂ ಒಂದು ಎಚ್‌ಎಫ್ ಆಕಳಿಂದ ಹಾಲು, ಮೊಸರು ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ಶ್ರಾವಣ ಮಾಸ ಹಾಗೂ ವಿವಿಧ ಸಮಾರಂಭಗಳಲ್ಲಿ ಹೂಗಳಿಗೂ ಉತ್ತಮ ಬೇಡಿಕೆ ಇದೆ. ಗುಲಾಬಿ ಹೂಗಳನ್ನು ಮಹಾಲಿಂಗಪುರದಲ್ಲಿ ಒಂದಕ್ಕೆ ₹10 ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ದಿನಕ್ಕೆ ಸರಾಸರಿ ₹900 ಆದಾಯ ಬರುತ್ತದೆ.

ಪತಿ ಮಹಾದೇವ ಶ್ಯಾಂಡಗಿ ತಮ್ಮ ಹೊಲದಲ್ಲಿ ಕೆಲಸ ಮಾಡುವುದರ ಜೊತೆಗೆ, ಎರಡು ಎತ್ತುಗಳೊಂದಿಗೆ ಇತರರ ಹೊಲಗಳಲ್ಲಿ ಬಾಡಿಗೆ ಕೆಲಸ ಮಾಡುತ್ತಾರೆ. ಅತ್ತೆ ನಿಲಮ್ಮ ಹಾಗೂ ಮಾವ ಜಯಪ್ಪ ಮನೆ ಹಾಗೂ ಹೈನುಗಾರಿಕೆ ನೋಡಿಕೊಳ್ಳುತ್ತಾರೆ. ಮೂವರು ಪುತ್ರರಲ್ಲಿ ಇಬ್ಬರು ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಸೇವೆ ಸಲ್ಲಿಸುತ್ತಿದ್ದು, ಮತ್ತೊಬ್ಬ ಪುತ್ರ ಪದವಿ ಶಿಕ್ಷಣ ಪಡೆಯುತ್ತ ಕೃಷಿ ಕಾರ್ಯಗಳಲ್ಲಿ ಕೈಜೋಡಿಸುತ್ತಾನೆ.

ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಸುಮಿತ್ರಾ ಅವರು, “ನಮಗೆ ಇನ್ನೂ ಆರು ಜೇನು ಪೆಟ್ಟಿಗೆಗಳ ಅಗತ್ಯವಿದೆ. ಗುಲಾಬಿ ಸಸಿ ನೆಡುವುದಕ್ಕೆ ಹಣ ಸಹಾಯ ನೀಡುವುದಾಗಿ ತೋಟಗಾರಿಕೆ ಇಲಾಖೆ ತಿಳಿಸಿದ್ದರೂ ಇನ್ನೂ ಲಭ್ಯವಾಗಿಲ್ಲ. ನಮ್ಮಂತಹ ಸಣ್ಣ ಹಿಡುವಳಿದಾರ ರೈತರಿಗೆ ಸರಿಯಾದ ಸೌಲಭ್ಯ ದೊರೆಯಬೇಕು” ಎಂದು ಮನವಿ ಮಾಡಿದರು.

#ಗುಲಾಬಿಕೃಷಿ #ಮೌಲ್ಯವರ್ಧನೆ #ರೈತಮಹಿಳೆ #ಸ್ವಾವಲಂಬನೆ #ಸಮಗ್ರಕೃಷಿ #ಗ್ರಾಮೀಣಆರ್ಥಿಕತೆ #ಕೃಷಿಯಲ್ಲಿಯುನವೀನತೆ #Mudhol #WomenInAgriculture

ಕಾಮೆಂಟ್‌ಗಳು