ವಾಣಿಜ್ಯ ಶಿಕ್ಷಣದಿಂದ ಉದ್ಯಮಶೀಲತೆ ಹಾಗೂ ನಾಯಕತ್ವಕ್ಕೆ ಬಲ:ಮೂಗನೂರಮಠ

ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಶಿಕ್ಷಣದ ಮಹತ್ವ ದಿನೇದಿನೇ ಹೆಚ್ಚುತ್ತಿದ್ದು, ಅದು ವಿದ್ಯಾರ್ಥಿಗಳಿಗೆ ಕೇವಲ ಉದ್ಯೋಗ ಪಡೆಯುವ ಸಾಧನವಾಗದೆ ಉದ್ಯಮಶೀಲತೆ, ನಾಯಕತ್ವ ಹಾಗೂ ಆರ್ಥಿಕ ಜ್ಞಾನವನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಎಸ್.ಆರ್. ಮೂಗನೂರಮಠ ಅವರು ಹೇಳಿದರು.

Petkarmedia: “ವಾಣಿಜ್ಯ ಸುಮನ” ವಾರ್ಷಿಕ ಸಂಚಿಕೆ ಬಿಡುಗಡೆ.

ನಗರದ ಬ.ವಿ.ವಿ. ಸಂಘದ ಬಸವೇಶ್ವರ ಪದವಿ–ಪೂರ್ವ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಸಂಘದ ನೂತನ ಸಭಾಭವನದಲ್ಲಿ ಬುಧವಾರ ಜರುಗಿದ ೨೦೨೫–೨೬ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭ, “ವಾಣಿಜ್ಯ ಸುಮನ” ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಶಿಕ್ಷಣವು ಅಂಕಗಳ ಗಳಿಕೆಗೆ ಮಾತ್ರ ಸೀಮಿತವಾಗದೆ, ವ್ಯಕ್ತಿತ್ವ ನಿರ್ಮಾಣ, ನೈತಿಕ ಮೌಲ್ಯಗಳ ಬೆಳವಣಿಗೆ ಹಾಗೂ ಸಮಾಜಮುಖಿ ಚಿಂತನೆಗೆ ದಾರಿ ತೋರಿಸಬೇಕು ಎಂದರು. ಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ನಿರ್ಮಾಣ ಹಾಗೂ ನೈತಿಕ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

ವಾಣಿಜ್ಯ ಕ್ಷೇತ್ರವು ದೇಶದ ಆರ್ಥಿಕ ಬೆನ್ನೆಲುಬಾಗಿದ್ದು, ಈ ಕ್ಷೇತ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬಹುದು. ಉದ್ಯಮ ಆರಂಭಿಸುವ ಧೈರ್ಯ, ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಚಾತುರ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಂದಿನ ಯುವಜನತೆ ಶಿಸ್ತು, ಸಮಯಪಾಲನೆ ಮತ್ತು ಮೌಲ್ಯಾಧಾರಿತ ಬದುಕನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸ್ಪಷ್ಟ ಗುರಿಯೊಂದಿಗೆ ಮುಂದುವರೆದರೆ ಯಶಸ್ಸು ಖಚಿತ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ಜಗನ್ನಾಥ ವಿ. ಚವ್ಹಾಣ ಅವರು, ಮಹಾವಿದ್ಯಾಲಯದ ಶೈಕ್ಷಣಿಕ ಗುಣಮಟ್ಟವು ಅಧ್ಯಾಪಕರ ಶ್ರಮ ಮತ್ತು ವಿದ್ಯಾರ್ಥಿಗಳ ಪರಿಶ್ರಮದ ಫಲವಾಗಿದೆ ಎಂದರು. ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಜೀವನದ ಹೊಸ ಹಂತಕ್ಕೆ ಕಾಲಿಡುತ್ತಿದ್ದು, ಆತ್ಮವಿಶ್ವಾಸ, ಮೌಲ್ಯನಿಷ್ಠೆ ಹಾಗೂ ಸಮಾಜದ ಜವಾಬ್ದಾರಿಯೊಂದಿಗೆ ಮುಂದಿನ ಪಯಣವನ್ನು ಯಶಸ್ವಿಯಾಗಿ ಸಾಗಿಸಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ “ವಾಣಿಜ್ಯ ಸುಮನ” ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಯೋಜಕರಾದ ಶ್ರೀಮತಿ ಜಿ.ಎಸ್. ಶೆಲ್ಲಿಕೇರಿ ಸ್ವಾಗತಿಸಿದರು. ಬಿ.ವೈ. ಬಂಡವಾಳಕರ ಅತಿಥಿಗಳನ್ನು ಪರಿಚಯಿಸಿದರು. ಮುನೀರ್ ಹುನಗುಂದ ವಾರ್ಷಿಕ ವರದಿ ವಾಚನ ಮಾಡಿದರು. ಶ್ರೀಮತಿ ಸುಹಾಸಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸಂಗೀತಾ ಗರಗದಮಠ ವಂದಿಸಿದರು. ಮಹಾವಿದ್ಯಾಲಯದ ಉಪನ್ಯಾಸಕರು, ಕಚೇರಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ಕಾಮೆಂಟ್‌ಗಳು