ಬಾಗಲಕೋಟೆ:ವಿಶೇಷ ಅಧಿವೇಶನ ಪ್ರಜಾಪ್ರಭುತ್ವ ವಿರೋಧಿ – ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಬಾಗಲಕೋಟೆ: ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೈಗೊಂಡಿರುವ ಬದಲಾವಣೆಗಳನ್ನು ವಿರೋಧಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ವಿಶೇಷ ವಿಧಾನಮಂಡಲ ಅಧಿವೇಶನ ಕರೆದಿರುವುದು ಸಂಪೂರ್ಣ ಅನಾವಶ್ಯಕ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಟೀಕಿಸಿದರು.

Petkarmedia: ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು.

ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ವಿರುದ್ಧ ದ್ವೇಷ ರಾಜಕಾರಣ ನಡೆಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸನಸಭೆಯ ಪಾವಿತ್ರ್ಯವನ್ನೇ ಹಾಳು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನಿರ್ಣಯಗಳನ್ನು ಕೈಗೊಂಡು, ರಾಜ್ಯದ ಜನರನ್ನು ಕೇಂದ್ರ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದ ಕಾಂಗ್ರೆಸ್ ಸರ್ಕಾರ, ಕೇಂದ್ರದ ವಿರುದ್ಧ ಅಪಪ್ರಚಾರದಲ್ಲೇ ತೊಡಗಿದೆ ಎಂದು ಆಪಾದಿಸಿದ ವಿಜಯೇಂದ್ರ, ವಕ್ಫ್ ಬಿಲ್, ಒಂದು ದೇಶ–ಒಂದು ಚುನಾವಣೆ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವು ಮಹತ್ವದ ಕೇಂದ್ರ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಿ ಪಡಿಸುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಏಕಾಏಕಿ ವಿಶೇಷ ಅಧಿವೇಶನ ಕರೆದಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಮಾತ್ರವಲ್ಲ, ನಾಡಿನ ಜನತೆಗೆ ಮಾಡಿದ ಅಪಮಾನವಾಗಿದೆ ಎಂದು ಅವರು ಕಿಡಿಕಾರಿದರು.

ಇದೇ ವೇಳೆ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ವಿಚಾರ ಇನ್ನೂ ರದ್ದಾಗಿಲ್ಲ. ಈ ಕುರಿತು ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆ ನಡೆದಿದ್ದು, ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸಲಾಗಿದೆ. ರಾಷ್ಟ್ರ ಮಟ್ಟದ ಅಧ್ಯಕ್ಷರ ಚುನಾವಣೆ ಬಳಿಕ ಈ ಕುರಿತು ಅಂತಿಮ ಚರ್ಚೆ ನಡೆಯಲಿದೆ ಎಂದರು.

ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಬಿಜೆಪಿಗೆ ಸವಾಲು ಮತ್ತು ಅವಕಾಶ ಎರಡೂ ಆಗಿದ್ದು, ಕಾಂಗ್ರೆಸ್ ಆಡಳಿತದಿಂದ ಬೇಸತ್ತಿರುವ ಜನ ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಯಾವುದೇ ಅನುಕಂಪ ಕಾಂಗ್ರೆಸ್‌ಗೆ ಲಭಿಸುವುದಿಲ್ಲ; ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಸಣ್ಣಪುಟ್ಟ ಅಸಮಾಧಾನಗಳಿದ್ದು, ಅವುಗಳನ್ನು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚರ್ಚಿಸಿ ಶೀಘ್ರವೇ ಬಗೆಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.


#NAREGA

#MNREGA

#SpecialSession

#BYVijayendra

#Siddaramaiah

#KarnatakaPolitics

#CongressVsBJP

#CentralGovernment

#FederalSystem

#BagalkotNews

#KarnatakaNews

#PoliticalNews

ಕಾಮೆಂಟ್‌ಗಳು