ಸಿದ್ದೇಶ್ವರ ಶ್ರೀಗಳು ಶಿಸ್ತುಬದ್ದ ಜೀವನಕ್ಕೆ ಆದರ್ಶ :ಡಾ. ವೀರಣ್ಣ ಚರಂತಿಮಠ

ಬಾಗಲಕೋಟೆ: ೨೦ನೇ ಶತಮಾನದ ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳು ಅವರ ಜ್ಞಾನಸಂಪತ್ತು ಅಪಾರವಾಗಿದ್ದು, ಸರಳ ಬದುಕು, ಶಿಸ್ತು ಮತ್ತು ನಿಷ್ಠೆ ನಮ್ಮೆಲ್ಲರ ಜೀವನಕ್ಕೆ ಆದರ್ಶವಾಗಿದೆ ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.

Petkarmedia:ಸಾಹಿತಿ ರಾಜು ಗಡ್ಡಿಯವರ ರಚನೆಯ “ಖಾಲಿ ಕೊಡಗಳು” ಹಾಗೂ ಜಿ.ಎಂ. ಸಿಂಧೂರ ಅವರ “ಬಿಂಬ” ಕವನ ಸಂಕಲನದ ಪುಸ್ತಕ ಬಿಡುಗಡೆ ನಡೆಯಿತು.
Petkarmedia:ಭಾರತೀಯ ರಕ್ಷಣಾ ಪಡೆಯ ನಿವೃತ್ತ ಯೋಧರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು

ನಗರದ ವಿದ್ಯಾಗಿರಿಯ ವಚನ ರಕ್ಷಕ ಗೆಳೆಯರ ಬಳಗದ ವತಿಯಿಂದ  ಕುದರಿಕನ್ನೂರ ಬಡಾವಣೆಯಲ್ಲಿ ಆಯೋಜಿಸಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರಸ್ವಾಮಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಾಗಲಕೋಟೆಯೊಂದಿಗೆ ಸಿದ್ದೇಶ್ವರ ಶ್ರೀಗಳಿಗೆ ಅಪಾರ ನಂಟಿದ್ದು, ಅವರ ಪ್ರವಚನಗಳಿಗೆ ನಸುಕಿನಲ್ಲೇ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. “ನಾವು ಸ್ವಾಮಿ ವಿವೇಕಾನಂದರನ್ನು ನೋಡಿಲ್ಲ; ಆದರೆ ಅವರ ಆದರ್ಶಗಳನ್ನು ಸಿದ್ದೇಶ್ವರ ಶ್ರೀಗಳಲ್ಲಿ ಕಂಡೆವು. ಅವರು ೨೦ನೇ ಶತಮಾನದ ಶ್ರೇಷ್ಠ ಸಂತರು; ಜ್ಞಾನದ ಮಾರ್ಗವನ್ನು ತೋರಿಸಿದ ಮಹಾನ್ ತತ್ವಜ್ಞಾನಿ. ಅವರ ಮಾರ್ಗದರ್ಶನದಲ್ಲಿ ಬದುಕು ಸಾಗಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗುರುವಂದನೆ” ಎಂದರು.

ಪ್ರಾಧ್ಯಾಪಕ ಡಾ. ಜಿ.ಜಿ. ಹಿರೇಮಠ ಉಪನ್ಯಾಸ ನೀಡಿ, “ಪದ್ಮ ಪ್ರಶಸ್ತಿಯನ್ನು ವಿನಮ್ರವಾಗಿ ನಿರಾಕರಿಸಿದ ಶತಮಾನ ಕಂಡ ಜೇಬಿಲ್ಲದ ಸಂತರು ಸಿದ್ದೇಶ್ವರ ಶ್ರೀಗಳು. ಹೊಟ್ಟೆ, ನೆತ್ತಿ, ನಾಲಿಗೆಯನ್ನು ಶುದ್ಧವಾಗಿಟ್ಟ ಸಾಧಕರು. ಪ್ರಕೃತಿಯಲ್ಲಿ ದೈವವನ್ನು ಕಂಡವರು. ೧೯ನೇ ವಯಸ್ಸಿನಲ್ಲೇ ಭಗವದ್ಗೀತೆ ಹಾಗೂ ಸಿದ್ಧಾಂತ ಶಿಖಾಮಣಿಯಲ್ಲಿ ಅಪಾರ ಪಾಂಡಿತ್ಯ ಸಾಧಿಸಿ ವಿದ್ವಾಂಸ ಸ್ಥಾನ ಪಡೆದ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದು ಹೇಳಿದರು.

ಸಿದ್ದೇಶ್ವರ ಶ್ರೀಗಳ ಒಡನಾಡಿ ಹಾಗೂ ಶಿಷ್ಯರಾದ ಜ್ಞಾನಯೋಗಾಶ್ರಮದ ಶ್ರೀ ಹರ್ಷಾನಂದ ಸ್ವಾಮಿಗಳು ಮಾತನಾಡಿ, “ಶ್ರೀಗಳು ಕರುಣಾ ಸಾಗರ. ಬಡವರು, ಪರಿಸರ ಹಾಗೂ ಪ್ರಾಣಿಗಳ ಮೇಲಿನ ಅಪಾರ ಕರುಣೆ ಅವರ ಜೀವನದ ಸಾರ. ಜ್ಞಾನ ದಾಸೋಹ ಹಾಗೂ ಅನ್ನ ದಾಸೋಹವೇ ಅವರ ಮೊದಲ ಆದ್ಯತೆ” ಎಂದರು.

ಮೈಗೂರು ಶಿವಾನಂದ ಮಠದ ಶ್ರೀ ಗುರುಪ್ರಸಾದ ಸ್ವಾಮಿಗಳು ಹಾಗೂ ದಿವ್ಯ ಸಾನಿಧ್ಯ ವಹಿಸಿದ್ದ ವಿದ್ಯಾಗಿರಿಯ ಕನ್ನೂರ ಹಿರೇಮಠದ ಶ್ರೀ ಸ.ಸ. ವಿಶ್ವರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ಜಗತ್ತು ಕಂಡ ಶ್ರೇಷ್ಠ ಸಂತ–ತತ್ವಜ್ಞಾನಿ ಸಿದ್ದೇಶ್ವರ ಅಪ್ಪಂಗಳು. ಅವರು ಹೇಳಿದ್ದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಪಾವನವಾಗುತ್ತದೆ” ಎಂದರು.

ಶಾಸ್ತ್ರೀಯ ಸಂಗೀತ ಪಂಡಿತ ಜಯತೀರ್ಥ ತಾಸಗಾಂವಕರ ವಚನಗಾನ ನಮನ ನಡೆಸಿಕೊಟ್ಟರು. ಅವರಿಗೆ ಚಂದ್ರಶೇಖರ ಆಲೂರ (ತಬಲಾ) ಹಾಗೂ ಪ್ರಕಾಶ ರುದ್ರಸ್ವಾಮಿಮಠ (ಹಾರ್ಮೋನಿಯಮ್) ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಸಾಧಕರಿಗೆ, ಭಾರತೀಯ ರಕ್ಷಣಾ ಪಡೆಯ ನಿವೃತ್ತ ಯೋಧರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವೃದ್ಧಾಶ್ರಮಕ್ಕೆ ಆಹಾರ ವಿತರಣೆ, ಅನಾಥ ಮಕ್ಕಳಿಗೆ ಸಹಾಯಧನ ವಿತರಣೆ, ಬಡ ಶಾಲಾ ಮಕ್ಕಳಿಗೆ ನೋಟುಪುಸ್ತಕ ಹಾಗೂ ಕಂಪಾಸ್ ವಿತರಿಸಲಾಯಿತು.

ಸಾಹಿತಿ ರಾಜು ಗಡ್ಡಿಯವರ ರಚನೆಯ “ಖಾಲಿ ಕೊಡಗಳು” ಹಾಗೂ ಜಿ.ಎಂ. ಸಿಂಧೂರ ಅವರ “ಬಿಂಬ” ಕವನ ಸಂಕಲನದ ಪುಸ್ತಕ ಬಿಡುಗಡೆ ನಡೆಯಿತು. ವೇದಿಕೆಯಲ್ಲಿ ಹಿರಿಯರಾದ ಶ್ರೀಶೈಲ ಡೆಂಗಿ ಉಪಸ್ಥಿತರಿದ್ದರು. ವಚನ ರಕ್ಷಕ ಗೆಳೆಯರ ಬಳಗದ ಸಂಚಾಲಕ ಮುತ್ತು ಮಡಿವಾಳರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಕುಂಬಾರ ಸ್ವಾಗತಿಸಿದರು, ಎಸ್.ಎಸ್. ತೆಗ್ಗಿ ವಂದಿಸಿದರು, ಡಾ. ರವಿ ಕೋಟೆಣ್ಣವರ ಪರಿಚಯಿಸಿದರು. ಮೋಹನ ದೇಶಪಾಂಡೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬಾಗಲಕೋಟೆ–ವಿದ್ಯಾಗಿರಿ–ನವನಗರದ ಸಾವಿರಾರು ಭಕ್ತರು ಭಾಗವಹಿಸಿ ಜ್ಞಾನ ದಾಸೋಹ ಹಾಗೂ ಅನ್ನ ದಾಸೋಹ ಪಡೆದು ಪುನಿತರಾದರು.

ಕಾಮೆಂಟ್‌ಗಳು