ಒಳಚರಂಡಿ ನೀರಿನಿಂದ ಬೆಳೆ ಹಾನಿ – ಎತ್ತಿನ ಬಂಡಿ ಸಮೇತ ಬಿಟಿಡಿಎ ಕಚೇರಿಗೆ ಮುತ್ತಿಗೆ

ಬಾಗಲಕೋಟೆ: ಒಳಚರಂಡಿ ನೀರು ರೈತರ ಕಬ್ಬಿನ ಹೊಲಗಳಿಗೆ ನುಗ್ಗಿ ಬೆಳೆ ನಾಶವಾಗುವ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ರೈತರು ಬಿಟಿಡಿಎ (ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ) ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Petkarmedia:ಒಳಚರಂಡಿ ನೀರು ರೈತರ ಕಬ್ಬಿನ ಹೊಲಗಳಿಗೆ ನುಗ್ಗಿ ಬೆಳೆ ನಾಶವಾಗುವ ಸ್ಥಿತಿ
Petkarmedia:ಎತ್ತಿನ ಬಂಡಿ ಸಮೇತ  ರೈತರು ಬಿಟಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂದೀಶ್ವರ ನಗರ ವ್ಯಾಪ್ತಿಯ ಹತ್ತಾರು ಎಕರೆ ಕಬ್ಬಿನ ಹೊಲಗಳಿಗೆ ಬಿಟಿಡಿಎ ಕಾಲೋನಿಯಿಂದ ಹೊರಹೊಮ್ಮುತ್ತಿರುವ ಯುಜಿಡಿ (ಹೊಲಸು) ನೀರು ನುಗ್ಗಿದ್ದು, ಕಬ್ಬು ಕಟಾವು ಮಾಡಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ ಎಂದು ರೈತರು ದೂರಿದರು. ಹೊಲಗಳಲ್ಲಿ ನೀರು ನಿಂತು ಕೆರೆಗಳಂತಾಗಿದ್ದು, ತೋಟದ ಮನೆಗಳು ಹಾಗೂ ಬೋರವೆಲ್‌ಗಳಿಗೆ ಕಲುಷಿತ ನೀರು ಸೇರಿರುವುದರಿಂದ ಕುಡಿಯುವ ನೀರು ದೂಷಿತವಾಗಿದೆ. ಇದರಿಂದ ಸಣ್ಣ ಮಕ್ಕಳು ಹಾಗೂ ವಯಸ್ಸಾದವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳೂ ನಡೆದಿವೆ ಎಂದು ಆರೋಪಿಸಿದರು. ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ ಎಂದೂ ರೈತರು ಹೇಳಿದರು.

ಈ ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶಗೊಂಡ ರೈತರು, ಎತ್ತಿನ ಬಂಡಿ ಸಮೇತ ಬಿಟಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸಿ ಗೇಟ್ ಬಂದ್ ಮಾಡಿ ಅಧಿಕಾರಿಗಳನ್ನು ಒಳಗೆ ಬಿಡದೆ ತಡೆದರು.

ಸ್ಥಳಕ್ಕೆ ನವನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ರೈತರನ್ನು ಮನವೊಲಿಸಲು ಪ್ರಯತ್ನಿಸಿದರೂ ಅವರು ಜಗ್ಗಲಿಲ್ಲ. ಬಿಟಿಡಿಎ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, ಯುಜಿಡಿ ನೀರು ತಕ್ಷಣ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಮುಂದಿನ ಯಾವುದೇ ಅನಾಹುತಗಳಿಗೆ ಬಿಟಿಡಿಎವೇ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.



Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು