ಮುಧೋಳ:ಲೋಕಾಪುರ ಗ್ಯಾರೇಜ್‌ನಲ್ಲಿ ಡಿಸೇಲ್ ಕಳ್ಳಾಟ: ಪೆಟ್ರೋಲ್ ಬಂಕ್ ಮಾಲೀಕ ಲೋಕಣ್ಣ ಕತ್ತಿಯಿಂದ ಗಂಭೀರ ಆರೋಪ

ಮುಧೋಳ: ಲೋಕಾಪುರ ಪಟ್ಟಣದ ಹೊರವಲಯದ ಗ್ಯಾರೇಜ್ ಒಂದರಲ್ಲಿ ಕಳೆದ ಮೂರು ನಾಲ್ಕು ತಿಂಗಳಿಂದ ಅಕ್ರಮವಾಗಿ ಡಿಸೇಲ್ ಫಿಲ್ಲಿಂಗ್ ನಡೆಯುತ್ತಿದೆ ಎಂದು ಖಾಸಗಿ ಪೆಟ್ರೋಲ್ ಬಂಕ್ ಮಾಲೀಕ ಲೋಕಣ್ಣ ಕತ್ತಿ ಗಂಭೀರ ಆರೋಪ ಮಾಡಿದ್ದಾರೆ.

ಲೋಕಣ್ಣ ಕತ್ತಿ ಅವರ ಪೆಟ್ರೋಲ್ ಬಂಕ್ ಸಮೀಪದಲ್ಲೇ ಇರುವ ಗ್ಯಾರೇಜ್‌ನಲ್ಲಿ ನೀರಿನ ಪಂಪ್ ಮೂಲಕ ಲಾರಿ ಹಾಗೂ ಓಪನ್ ಬಾಡಿ ಟ್ರಕ್‌ಗಳಿಗೆ ಡಿಸೇಲ್ ತುಂಬಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸುಮಾರು 250 ಲಾರಿಗಳನ್ನು ಹೊಂದಿರುವ ಟ್ರಾನ್ಸ್‌ಪೋರ್ಟ್ ಕಂಪನಿಯೊಂದರ ವಿರುದ್ಧ ಡಿಸೇಲ್ ಸ್ಮಗ್ಲಿಂಗ್ ಆರೋಪ ಕೇಳಿಬಂದಿದೆ.

ಮಹಾರಾಷ್ಟ್ರದಿಂದ ಕಳ್ಳ ಸಾಗಾಣಿಕೆ ಮೂಲಕ ಡಿಸೇಲ್ ತರಲಾಗುತ್ತಿದೆ ಎಂಬ ಅನುಮಾನವಿದ್ದು, ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ನಡೆದಿದೆ ಎಂದು ಲೋಕಣ್ಣ ಕತ್ತಿ ಆರೋಪಿಸಿದ್ದಾರೆ. ಟ್ಯಾಂಕರ್ ಹಾಗೂ ಲಾರಿಗಳಿಗೆ ಬೇರೆ ಬೇರೆ ನೋಂದಣಿ ಸಂಖ್ಯೆಗಳ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿರುವುದು ಕೂಡ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದು, ಶೀಘ್ರವೇ ಲಿಖಿತ ದೂರು ನೀಡುವುದಾಗಿ ಅವರು ಹೇಳಿದ್ದಾರೆ. ಈ ಅಕ್ರಮದ ಹಿಂದೆ ಅಂತರಾಜ್ಯ ಮಟ್ಟದ ದೊಡ್ಡ ಜಾಲವಿದ್ದು, ಸಂಪೂರ್ಣ ತನಿಖೆ ನಡೆಸಬೇಕೆಂದು ಲೋಕಣ್ಣ ಕತ್ತಿ ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳು