ಸಿಎಂ ಸಿದ್ದರಾಮಯ್ಯ ದೇವರಾಜ ಅರಸು ಅವರೊಂದಿಗೆ ಹೋಲಿಕೆ ಸರಿಯಲ್ಲ: ಜಗದೀಶ್ ಶೆಟ್ಟರ್

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರೊಂದಿಗೆ ಹೋಲಿಕೆ ಮಾಡಿಕೊಂಡು ಮಾತನಾಡುವುದು ಸಮಂಜಸವಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

Petkarmedia:ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ದೇವರಾಜ ಅರಸು ಅವರ ಆಡಳಿತದಲ್ಲಿ ಜಾರಿಯಾದ ಭೂಸಂಸ್ಕರಣೆ ಕಾಯ್ದೆ ಸೇರಿದಂತೆ ಅನೇಕ ಸಾಮಾಜಿಕ ಸುಧಾರಣೆಗಳು ರಾಜ್ಯದ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿವೆ. ಅವರ ಆಡಳಿತವನ್ನು ಇಂದಿನ ಆಡಳಿತದೊಂದಿಗೆ ಹೋಲಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.

ಏಳು ವರ್ಷಗಳ ಆಡಳಿತವನ್ನು ದೊಡ್ಡ ಸಾಧನೆಯಂತೆ ಪ್ರದರ್ಶಿಸುವಂತಿಲ್ಲ ಎಂದ ಅವರು, “ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 15 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಆದರೆ ಇಲ್ಲಿಯವರೆಗೆ ಎಲ್ಲರಿಗೂ ಸೂರು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಟೀಕಿಸಿದರು.

“ಸ್ಥಳೀಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಆಗದೆ, ವಿದೇಶದಿಂದ ಬಂದವರಂತೆ ಕಾಣುವವರಿಗೆ ಕೋಗಿಲು ಪ್ರದೇಶದಲ್ಲಿ ಸೂರು ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಆಡಳಿತದ ಆದ್ಯತೆಗಳ ಬಗ್ಗೆ ಪ್ರಶ್ನೆಗಳು ಎದ್ದು ಬರುತ್ತವೆ” ಎಂದು ಶೆಟ್ಟರ್ ಹೇಳಿದರು.

ಸರ್ಕಾರದಲ್ಲೇ ಎರಡು–ಮೂರು ಗುಂಪುಗಳಾಗಿ ನಾಯಕರು ಪ್ರತ್ಯೇಕವಾಗಿ ಸಂಚರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪಕ್ಷ ಬಿಟ್ಟು ಹೋಗಿದವರ ‘ಘರ್ ವಾಪಸಿ’ ಕುರಿತು ಪ್ರತಿಕ್ರಿಯಿಸಿ, “ಇದು ರಾಜ್ಯಮಟ್ಟದಲ್ಲಿ ನಿರ್ಧಾರವಾಗಬೇಕಾದ ವಿಷಯ. ವಿವಿಧ ಜಿಲ್ಲೆಗಳ ಪ್ರವಾಸದ ವೇಳೆ ಹಲವರು ಪಕ್ಷಕ್ಕೆ ಮರಳುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಕೆಲವರು ಕಾಂಗ್ರೆಸ್‌ನಿಂದಲೂ ಬರಲು ಸಿದ್ಧತೆ ತೋರಿದ್ದಾರೆ” ಎಂದರು.

ರಾಜ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಸಭೆಗಳು ನಡೆದಿದ್ದು, ಪ್ರತಿಯೊಂದು ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ ಶೆಟ್ಟರ್, “ರಾಜ್ಯದ ನಾಯಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಗೆಲುವು ಸಾಧ್ಯ. ಭಿನ್ನಾಭಿಪ್ರಾಯಗಳಿದ್ದರೂ ಸಂವಾದದ ಮೂಲಕ ಪರಿಹರಿಸಿಕೊಳ್ಳಲಾಗುವುದು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರು ಪಕ್ಷದ ಏಕತೆ ಮಂತ್ರದೊಂದಿಗೆ ಸಂಘಟನೆ ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.

ಕಾಮೆಂಟ್‌ಗಳು