ಬಾಗಲಕೋಟೆ:ಜಿಲ್ಲಾ ಮಾನವ ಅಭಿವೃದ್ಧಿ ವರದಿ ನಿಖರವಾಗಿರಲಿ: ಜಿಲ್ಲಾಧಿಕಾರಿ ಸಂಗಪ್ಪ

ಬಾಗಲಕೋಟೆ: ಜಿಲ್ಲಾ ಮಾನವ ಅಭಿವೃದ್ಧಿ ವರದಿ–2025 ನಿಖರವಾಗಿದ್ದರೆ ಮಾತ್ರ ಮುಂದಿನ ದಿನಗಳ ಅಭಿವೃದ್ಧಿಗೆ ದಿಕ್ಕು ಸಿಗಲಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

Petkarmedia:ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.

ಜಿಲ್ಲಾ ಪಂಚಾಯತ್‌ನ ನೂತನ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಾನವ ಅಭಿವೃದ್ಧಿ ವರದಿ–2025 ಹಾಗೂ ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ–2031 ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಕಿ–ಅಂಶಗಳ ಆಧಾರದಲ್ಲಿ ರೂಪುಗೊಳ್ಳುವ ಈ ವರದಿ ಮುಂದಿನ ಅಭಿವೃದ್ಧಿಗೆ ಪೂರಕವಾಗಲಿದೆ. ಸಂಬಂಧಿಸಿದ ಎಲ್ಲ ಇಲಾಖೆಗಳು ನಿಖರ ಮಾಹಿತಿ ಒದಗಿಸಬೇಕು. ಇಲಾಖೆಗೆ ಬಿಡುಗಡೆಯಾದ ಅನುದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು. ಸಂಪೂರ್ಣ ಅನುದಾನ ಸದ್ಬಳಕೆಯಾಗಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಜಿಲ್ಲೆಯ ಪ್ರಸ್ತುತ ಸ್ಥಿತಿ ಹಾಗೂ ಮುಂದಿನ ಐದು ವರ್ಷಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ದತ್ತಾಂಶ ಸಂಗ್ರಹಿಸುವ ಅಗತ್ಯವಿದೆ ಎಂದರು. ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಕೃಷಿ, ಕುಡಿಯುವ ನೀರು ಸೇರಿದಂತೆ ವಿವಿಧ ಕ್ಷೇತ್ರಗಳ ನಿಖರ ಮಾಹಿತಿ ಜನರ ಜೀವನಮಟ್ಟ ಸುಧಾರಣೆ ಹಾಗೂ ತಲಾ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಯೋಜನಾ ಇಲಾಖೆಯ ಮಾನವ ಅಭಿವೃದ್ಧಿ ವಿಭಾಗದ ಜಂಟಿ ಕಾರ್ಯದರ್ಶಿ ಹಾಗೂ ಹಿರಿಯ ನಿರ್ದೇಶಕ ಬಸವರಾಜ ಎಸ್ ಮಾತನಾಡಿ, ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ವರದಿಗಾಗಿ 117 ಅಂಶಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸ್ಥಳೀಯ ಸಂಪನ್ಮೂಲಗಳ ಬಳಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಮಾನವ ಅಭಿವೃದ್ಧಿ ವರದಿ ಆಧಾರದ ಮೇಲೆ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ಗಳಿಗೆ ಅನುದಾನ ಹಂಚಿಕೆ ಆಗುತ್ತದೆ. ತಾಯಂದಿರ ಮರಣ, ಶಿಶು ಮರಣ, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಸೇರಿದಂತೆ ಅಂಶಗಳನ್ನು ನಿಖರವಾಗಿ ದಾಖಲಿಸಬೇಕು. ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಗುರುತಿಸಿರುವ 17 ಮಾನದಂಡಗಳ ಆಧಾರದಲ್ಲಿ ವರದಿ ತಯಾರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಆಹೇರಿ, ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ಮುಖ್ಯ ಯೋಜನಾಧಿಕಾರಿ ಎ.ಬಿ. ಅಲ್ಲಮಪ್ರಭು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸ್ಥಳೀಯ, ನಿಖರ ಹಾಗೂ ವೇಗದ ಸುದ್ದಿಗಳಿಗಾಗಿ 👉 Petkarmedia.com ಫಾಲೋ ಮಾಡಿ.


#BagalkotNews #ಮಾನವಅಭಿವೃದ್ಧಿವರದಿ #DistrictHumanDevelopment#BagalkotUpdates #KarnatakaNews #ಜಿಲ್ಲಾವಿಕಾಸ#SustainableDevelopment #DistrictVision2031#Petkarmedia #LocalNews #ViralKannadaNews


ಕಾಮೆಂಟ್‌ಗಳು