ಒತ್ತಡದಿಂದ ಹೊರಬರಲು ಕ್ರೀಡೆಗಳು ಸಹಕಾರಿ : ಭಾಂಡಗೆ

ಬಾಗಲಕೋಟೆ  : ಸರಕಾರಿ ನೌಕರರು ದಿನನಿತ್ಯದ ಕೆಲಸದ ಒತ್ತಡದಿಂದ ಹೊರಬರಲು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಲಿವೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.


Petkarmedia: ಬಾಗಲಕೋಟೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ೨೦೨೩ನೇ ಸಾಲಿನ ಸರ್ವೋತ್ತಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ೨೦೨೩ನೇ ಸಾಲಿನ ಸರ್ವೋತ್ತಮ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನೌಕರರು ಮಾನಸಿಕವಾಗಿ, ದೈಹಿಕವಾಗಿ ಸದೃಡರಾದರೆ ಮಾತ್ರ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ನೌಕರ ವರ್ಗ ಮಾಡುತ್ತದೆ. ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ದೈಹಿಕವಾಗಿ ಆರೋಗ್ಯದಿಂದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ ಮಾತನಾಡಿ ಸರಕಾರಿ ನೌಕರರು ತಮ್ಮ ಕೆಲಸದಲ್ಲಿ ಉತ್ಸಾಹಿಗಳಾಗಿರಬೇಕಾದರೆ, ದೈಹಿಕವಾಗಿ ಮಾನಸಿಕವಾಗಿ ಸದೃಡವಾಗಬೇಕಾದರೆ ಕ್ರೀಡೆಗಳು ಮುಖ್ಯವಾಗಿವೆ. ಶಾಲಾ ಕಾಲೇಜುಗಳಲ್ಲಿ ಕ್ರೀಡೆಗಳಲ್ಲಿ ಹೇಗೆ ಹೆಚ್ಚು ಮಹತ್ವ ಕೊಡುತ್ತಾರೆ. ನೌಕರರಲ್ಲಿ ಮಹತ್ವ ಕೊಟ್ಟು ಸರಕಾರಿ ನೌಕರರ ಸಂಘ ಪ್ರತಿ ವರ್ಷ ಆಯೋಜಿಸುತ್ತಿದೆ. ನಿಮ್ಮ ಸ್ಪೂರ್ತಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ ಸರಕಾರಿ ಸೇವೆ ಎಂದರೆ ಕೇವಲ ಕರ್ತವ್ಯ ನಿರ್ವಹಣೆ ಮಾತ್ರವಲ್ಲ. ಅದು ಶಿಸ್ತು, ನಿಷ್ಟೆ ಮತ್ತು ಸಾರ್ವಜನಿಕ ಹಿತಕ್ಕಾಗಿ ದುಡಿಮೆ ಸಂಕೇತವಾಗಿದೆ. ಒತ್ತಡದ ಮಧ್ಯೆ ಕೆಲಸ ಮಾಡುತ್ತಿರುವ ಸರಕಾರಿ ನೌಕರರಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಅತ್ಯಂತ ಅಗತ್ಯವಾಗಿದೆ ಎಂದರು. ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ಆರೋಗ್ಯವಂತ ನೌಕರರು ಇದ್ದಾಗ ಮಾತ್ರ ಜನತೆಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸರಕಾರಿ ಸೇವೆಯಲ್ಲಿ ಬರುವ ಸವಾಲುಗಳನ್ನು ಎದುರಿಸಿ ಕೆಲಸ ಮಾಡಬೇಕಾಗುತ್ತದೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ನಮಗೆ ಉತ್ಸಾಹ ದೊರೆಯುತ್ತದೆ ಎಂದರು. 

ಕಾಮೆಂಟ್‌ಗಳು