ಬಾದಾಮಿ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹೆಸರನ್ನು ಕೇಂದ್ರ ಸರ್ಕಾರ ಬದಲಿಸಿರುವುದಕ್ಕೆ ಕೆಪಿಸಿಸಿ ವಕ್ತಾರ ಮಹಾಂತೇಶ ಹಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Petkarmedia: ಕೆಪಿಸಿಸಿ ವಕ್ತಾರ ಮಹಾಂತೇಶ ಹಟ್ಟಿ
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ 20 ವರ್ಷಗಳಿಂದ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಲಿದೆ ಎಂದು ತಿಳಿಸಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರ ಉದ್ಯೋಗ ಹಕ್ಕು ಆಗಿತ್ತು. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮಹಾತ್ಮ ಗಾಂಧಿ ಹೆಸರನ್ನು ತೆಗೆದು ವಿ.ಬಿ.ಜಿ ರಾಮ್ ಜಿ ಎಂಬ ಹೆಸರಿನಲ್ಲಿ ಹೊಸ ರೂಪ ನೀಡಿರುವುದು ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಮಾಡಿದ ಅಪಮಾನ ಎಂದು ಅವರು ಆರೋಪಿಸಿದ್ದಾರೆ.
ಮನರೇಗಾ ಹಾಗೂ ಹೊಸ ವಿ.ಬಿ.ಜಿ ರಾಮ್ ಜಿ ಯೋಜನೆಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ ಹಟ್ಟಿ, ಹೊಸ ವ್ಯವಸ್ಥೆಯಿಂದ ಗ್ರಾಮೀಣ ಜನರ ಉದ್ಯೋಗ ಹಕ್ಕು ಕುಸಿಯಲಿದೆ, ಪಂಚಾಯಿತಿಗಳ ಅಧಿಕಾರಗಳು ಕುಂಠಿತಗೊಳ್ಳಲಿವೆ ಹಾಗೂ ರಾಜ್ಯಗಳ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬೀಳಲಿದೆ ಎಂದು ಎಚ್ಚರಿಸಿದರು.
ಮನರೇಗಾದಡಿ ಪ್ರತಿವರ್ಷ 100 ದಿನಗಳ ಉದ್ಯೋಗ ಖಾತ್ರಿ ಇತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಕೆಲಸಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಧಿಸೂಚನೆಗಳ ಮೇಲೆ ಅವಲಂಬಿತವಾಗಿದ್ದು, ಅಧಿಸೂಚನೆ ವಿಳಂಬವಾದರೆ ಗ್ರಾಮೀಣ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಕೃಷಿ ಮತ್ತು ಇತರೆ ಗ್ರಾಮೀಣ ಚಟುವಟಿಕೆಗಳಲ್ಲಿ ವರ್ಷಪೂರ್ತಿ ದೊರಕುತ್ತಿದ್ದ ಉದ್ಯೋಗ ಅವಕಾಶಗಳು ಕಡಿಮೆಯಾಗಲಿದ್ದು, ಕೂಲಿ ಕಾರ್ಮಿಕರು ಕಡಿಮೆ ವೇತನಕ್ಕೆ ಖಾಸಗಿ ಕೆಲಸಕ್ಕೆ ಅವಲಂಬಿತರಾಗಬೇಕಾದ ಅನಿವಾರ್ಯತೆ ಎದುರಾಗಲಿದೆ. ಪಂಚಾಯಿತಿಗಳಿಗೆ ಅನುದಾನ ಸಿಗದಿದ್ದರೆ ಕಾರ್ಮಿಕರಿಗೂ ಕೆಲಸ ಇರುವುದಿಲ್ಲ. ಇದರಿಂದ ಪಂಚಾಯಿತಿಗಳು ಕೇವಲ ಅನುಷ್ಠಾನಗೊಳಿಸುವ ಸಂಸ್ಥೆಗಳಾಗಿ ಸೀಮಿತಗೊಳ್ಳಲಿವೆ ಎಂದು ಮಹಾಂತೇಶ ಹಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
#MNREGA #EmploymentGuarantee #RuralJobs #MahanteshHatti #VBGRamJi #SaveMNREGA #RuralIndia #GramPanchayat #BadamiNews #KarnatakaPolitics #Congress #JobRights #VillageEconomy

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ