ಬಾಗಲಕೋಟೆ:ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನೇಮಕಾತಿಗೆ ವಿರೋಧ; KPCCಗೆ ಸಾವಿರಾರು ಸಹಿ ಸಹಿತ ಮನವಿ

ಬಾಗಲಕೋಟೆ: ಬಾಗಲಕೋಟೆ ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಭಿನ್ನಮತ ತೀವ್ರಗೊಂಡಿದ್ದು, ನೇಮಕಾತಿ ರದ್ದುಗೊಳಿಸುವಂತೆ ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಸಹಿ ಸಂಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು KPCCಗೆ ಮನವಿ ಸಲ್ಲಿಸಿದ್ದಾರೆ.

Petkarmedia:ನಗರ ಬ್ಲಾಕ್ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರಿಗೆ ಮನವಿ

ಅರ್ಜಿಗಳನ್ನು ಆಹ್ವಾನಿಸಿದ ಬಳಿಕ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿರುವುದೇ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಯಾವುದೇ ವ್ಯಕ್ತಿಗತ ವಿರೋಧವಲ್ಲ, ಪಕ್ಷದ ಸಂಘಟನಾ ಪ್ರಜಾಪ್ರಭುತ್ವ ಮತ್ತು ಪಾರದರ್ಶಕತೆಯ ಪ್ರಶ್ನೆ ಎಂದು ಕಾರ್ಯಕರ್ತರು ಸ್ಪಷ್ಟಪಡಿಸಿದ್ದಾರೆ. ಮುಂಬರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂತಹ ನಿರ್ಧಾರಗಳು ಪಕ್ಷಕ್ಕೆ ಹಾನಿಕಾರಕವಾಗಬಹುದು ಎಂದು ಎಚ್ಚರಿಕೆ ನೀಡಿದ್ದು, KPCC ತಕ್ಷಣ ಹಸ್ತಕ್ಷೇಪ ಮಾಡಬೇಕೆಂದು ಒತ್ತಾಯಿಸಿದ್ದಾರೆ.

‘ಮತವೇ ಇಲ್ಲ, ಸಂಘಟನಾ ಶಕ್ತಿ ಇಲ್ಲ, ಜನಬೆಂಬಲ ಇಲ್ಲ – ಹಾಗಿದ್ದರೆ ನಗರ ಬ್ಲಾಕ್ ಅಧ್ಯಕ್ಷ ಸ್ಥಾನ ಯಾವ ಆಧಾರದಲ್ಲಿ?’ ಎಂದು ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರು ನೇಮಕಾತಿಗೆ ವಿರೋಧ ವ್ಯಕ್ತಪಡಿಸಿದರು. ವಿಷಯವನ್ನು ರಾಜ್ಯಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುವುದು; KPCC ತಕ್ಷಣ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇರ ಹಸ್ತಕ್ಷೇಪ ಅಗತ್ಯ ಎಂದು ಕಾಂಗ್ರೆಸ್ ಮುಖಂಡರಾದ ಅಯೋಬಖಾನ್ ಬಾಗೇವಾಡಿ ಹಾಗೂ ಇರ್ಫಾನ್ ಮುರನಾಳ ಜಂಟಿಯಾಗಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡರು, ನೇಮಕಗೊಂಡ ವ್ಯಕ್ತಿಯ ಮತದಾರರ ವಿವರಗಳನ್ನು ಉಲ್ಲೇಖಿಸಿ, ಅವರು 2025–26ರ ಮತದಾರರ ಪಟ್ಟಿಯಲ್ಲಿ ಹಿರೇಮುರಾಳ ಗ್ರಾಮ, ಮುದ್ದೇಬಿಹಾಳ ತಾಲ್ಲೂಕು, ಮತಕ್ಷೇತ್ರ ಸಂಖ್ಯೆ 26ರಲ್ಲಿ ದಾಖಲಾಗಿರುವುದು ಸಾರ್ವಜನಿಕ ದಾಖಲೆಗಳಿಂದ ಸ್ಪಷ್ಟವಾಗುತ್ತದೆ ಎಂದರು. ಇಂತಹ ಸ್ಥಿತಿಯಲ್ಲಿ ಬಾಗಲಕೋಟೆ ನಗರ ಬ್ಲಾಕ್ ಅಧ್ಯಕ್ಷನಂತಹ ಪ್ರಮುಖ ಹುದ್ದೆಗೆ ನೇಮಕ ಮಾಡುವಾಗ ಸ್ಥಳೀಯ ರಾಜಕೀಯ ವಾಸ್ತವತೆ ಹಾಗೂ ಚುನಾವಣಾತ್ಮಕ ಪರಿಣಾಮಗಳನ್ನು ಪರಿಗಣಿಸಬೇಕಾಗಿತ್ತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ನಗರ ಬ್ಲಾಕ್ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಅನುಸರಿಸಿದ ಪ್ರಕ್ರಿಯೆ ಹಾಗೂ ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳು ಪಕ್ಷದ ಒಳಪಕ್ಷೀಯ ಪ್ರಜಾಪ್ರಭುತ್ವ, ಪಾರದರ್ಶಕತೆ ಮತ್ತು ಕಾರ್ಯಕರ್ತರ ಮೇಲಿನ ನಂಬಿಕೆಗೆ ಗಂಭೀರ ಧಕ್ಕೆ ತಂದಿವೆ ಎಂದು ಕಾರ್ಯಕರ್ತರು ಆರೋಪಿಸಿದರು. ದಿವಂಗತ ಶಾಸಕ ಎಚ್.ವೈ. ಮೇಟಿ ಅವರ ಶಿಫಾರಸು ಕುರಿತು ನೀಡಿದ ವಿವರಣೆಗಳು ಸ್ಪಷ್ಟತೆಯಿಗಿಂತ ಗೊಂದಲವೇ ಹೆಚ್ಚಿಸುತ್ತಿವೆ ಎಂದು ಟೀಕಿಸಿದರು.

ಒಟ್ಟಾರೆ, ನಗರ ಕಾಂಗ್ರೆಸ್ ಸಂಘಟನೆಯೊಳಗಿನ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನೇಮಕಾತಿ ವಿಚಾರದಲ್ಲಿ KPCC ತಕ್ಷಣ ಹಸ್ತಕ್ಷೇಪಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯ ಮುಂದುವರಿದಿದೆ.

#Bagalkote#Congress#KPCC#CityBlockPresident#BagalkoteCongress#CongressWorkers#OrganisationalDemocracy#PoliticalDevelopments#KarnatakaPolitics


ಕಾಮೆಂಟ್‌ಗಳು