ಕಲಂ 163 ಜಾರಿ: ಫೆ.26 ಪ್ರತಿಭಟನೆಗೆ ಅವಕಾಶವಿಲ್ಲ – ಎಸ್ಪಿ ಸಿದ್ದಾರ್ಥ ಗೋಯಲ್ ಖಡಕ್ ಎಚ್ಚರಿಕೆ

ಬಾಗಲಕೋಟೆ: ನಗರದಲ್ಲಿ ಕಲಂ 163 ಬಿಎನ್‌ಎಸ್‌ಎಸ್ 2023 (144 ಸಿಆರ್‌ಪಿಸಿ) ಪ್ರತಿಬಂಧಕಾಜ್ಞೆ ಜಾರಿಯಲ್ಲಿರುವುದರಿಂದ ಯಾವುದೇ ಪ್ರತಿಭಟನೆ ಅಥವಾ ಮೆರವಣಿಗೆಗಳಿಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.

ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಮೆರವಣಿಗೆ ವೇಳೆ ನಡೆದ ಘಟನೆಗೆ ಸಂಬಂಧಿಸಿ ಮೂರು ಪ್ರಕರಣಗಳು ದಾಖಲಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಪರಿಸ್ಥಿತಿ ಸಹಜವಾಗಿದ್ದು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಡಿಸಿ ಕಚೇರಿಯ ಸಭಾಂಗಣದಲ್ಲಿ ನಡೆದ ದ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಫೆ.26ರಂದು ಪ್ರತಿಭಟನಾ ಮೆರವಣಿಗೆ ನಡೆಸುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನೆಗಳಿಂದ ಅಶಾಂತಿ ಉಂಟಾದರೆ ಕೂಲಿ ಕಾರ್ಮಿಕರು ಹಾಗೂ ವ್ಯಾಪಾರಸ್ಥರ ಆರ್ಥಿಕ ಸ್ಥಿತಿಗೆ ಪೆಟ್ಟು ಬೀಳಲಿದೆ ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಗಳು ನಡೆಯುತ್ತಿರುವುದರಿಂದ ಹಾಗೂ ಹೋಳಿ, ಯುಗಾದಿ, ರಂಜಾನ್ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಗಳು ಯಾವುದೇ ಪ್ರತಿಭಟನೆ ನಡೆಸದೇ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ನಗರದಲ್ಲಿ ಪ್ರತಿಬಂಧಕಾಜ್ಞೆಯನ್ನು ಮಾರ್ಚ್ 1ರವರೆಗೆ ಮುಂದುವರಿಸಲಾಗಿದ್ದು, ಫೆ.24ರಿಂದ ನವನಗರದಲ್ಲಿ ಮಾತ್ರ ಪ್ರತಿಬಂಧಕಾಜ್ಞೆ ಹಿಂಪಡೆಯಲಾಗಿದೆ ಎಂದಿದ್ದಾರೆ.

ನಿಯಮ ಉಲ್ಲಂಘಿಸಿ ಬಂದ್ ಅಥವಾ ಪ್ರತಿಭಟನೆ ನಡೆಸಿ ಅಶಾಂತಿ ಸೃಷ್ಟಿಸಿದರೆ ಸಂಬಂಧಿಸಿದ ಸಂಘಟಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌ಗಳು