ಬಾಗಲಕೋಟೆ: ರಾಜ್ಯಮಟ್ಟದ “ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2025” ಹಾಗೂ “ಕು/ಸುಶ್ರಾವ್ಯ ಶೆಲ್ಲಿಕೇರಿ ಬಾಲಸಾಹಿತ್ಯ ಪ್ರಶಸ್ತಿ-2025” ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದು ಸಾಹಿತಿ ಮಲ್ಲಿಕಾರ್ಜುನ ಶೆಲ್ಲಿಕೇರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ ರಾಜ್ಯ ಹಾಗೂ ರಾಜ್ಯದಾಚೆಯಿಂದ ಕಥೆ, ಕಾದಂಬರಿ ಮತ್ತು ಕಾವ್ಯ ವಿಭಾಗಗಳಲ್ಲಿ ಒಟ್ಟು 149 ಕೃತಿಗಳು ಬಂದಿದ್ದು, ಕು/ಸುಶ್ರಾವ್ಯ ಶೆಲ್ಲಿಕೇರಿ ಬಾಲಸಾಹಿತ್ಯ ಪ್ರಶಸ್ತಿಗೆ 46 ಕೃತಿಗಳು ಸಲ್ಲಿಕೆಯಾಗಿವೆ ಎಂದು ಹೇಳಿದರು. ಈ ಮೂಲಕ ಒಟ್ಟು 195 ಕೃತಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಆರಂಭಿಕ ಹಂತದಲ್ಲಿ ಸ್ಥಳೀಯ ಹಿರಿಯ ಸಾಹಿತಿಗಳು ಕೃತಿಗಳನ್ನು ಪರಿಶೀಲಿಸಿ ತೀರ್ಪುಗಾರರಿಗೆ ನೀಡಿದ್ದರು. ಬಳಿಕ ಅಂತಿಮ ಹಂತದಲ್ಲಿ ತೀರ್ಪುಗಾರರು ವಿಜೇತ ಕೃತಿಗಳನ್ನು ಆಯ್ಕೆ ಮಾಡಿದ್ದಾರೆ ಎಂದರು.
ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2025ರಲ್ಲಿ ಕಾದಂಬರಿ ವಿಭಾಗದಲ್ಲಿ ‘ತೊಂಡೆ ಚಪ್ಪರ’ ಕೃತಿಗೆ ಶ್ರೀ ಪ್ರಮೋದ್ ಮರವಂತೆ, ಕಥಾಸಂಕಲನ ವಿಭಾಗದಲ್ಲಿ ‘ಒಂದು ತೇಗದ ಕುರ್ಚಿ’ ಕೃತಿಗೆ ಶ್ರೀ ಸಿದ್ದು ಸತ್ಯಣ್ಣವರ ಹಾಗೂ ಕವನಸಂಕಲನ ವಿಭಾಗದಲ್ಲಿ ‘ಅರ್ಧ ಮುಖಗಳ ಶಹರು’ ಕೃತಿಗೆ ಶ್ರೀಮತಿ ಶೋಭಾ ನಾಯಕ ಆಯ್ಕೆಯಾಗಿದ್ದಾರೆ. ಈ ಮೂವರಿಗೆ ತಲಾ ರೂ.10,000 ನಗದು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಗುವುದು ಎಂದರು.
ಕು/ಸುಶ್ರಾವ್ಯ ಶೆಲ್ಲಿಕೇರಿ ಬಾಲಸಾಹಿತ್ಯ ಪ್ರಶಸ್ತಿ-2025ರಲ್ಲಿ ‘ಮಹಿ’ (ಕಾದಂಬರಿ) ಕೃತಿಗೆ ಶ್ರೀಮತಿ ವಸು ವತ್ಸಲೆ ಹಾಗೂ ‘ಚಾರ್ಲಿ..ಚಾರ್ಲಿ..ವೇರ್ ಆರ್ ಯೂ’ (ಕತೆಗಳು) ಕೃತಿಗೆ ಶ್ರೀ ಗುಂಡುರಾವ್ ದೇಸಾಯಿ ಆಯ್ಕೆಯಾಗಿದ್ದಾರೆ. ಇವರಿಗೆ ತಲಾ ರೂ.5,000 ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಡಾ. ಚಿದಾನಂದ ಸಾಲಿ, ಡಾ. ತಾರಿಣಿ ಶುಭದಾಯಿನಿ, ಶ್ರೀ ಕನ್ನಾಡಿಗ ನಾರಾಯಣ ಹಾಗೂ ಶ್ರೀ ರಾಜಶೇಖರ ಕುಕ್ಕುಂದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 8, 2026ರಂದು ಬೆಳಿಗ್ಗೆ 10.30ಕ್ಕೆ ನವನಗರದ ಸೆಕ್ಟರ್ 24ರಲ್ಲಿ ಇರುವ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ಹಿರಿಯ ಸಾಹಿತಿಗಳಾದ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಶ್ರೀಮತಿ ಹೇಮಾ ಪಟ್ಟಣಶೆಟ್ಟಿ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ