ಬಾದಾಮಿ:ಮಹಾಂತೇಶ ಮಮದಾಪೂರ ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. 2028ರ ವಿಧಾನಸಭೆ ಚುನಾವಣೆಯಲ್ಲಿ ಎಂ.ಕೆ. ಪಟ್ಟಣಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ಪಟ್ಟಣಶೆಟ್ಟಿ ಅವರ ನಿವಾಸದ ಆವರಣದಲ್ಲಿ ಆಯೋಜಿಸಿದ್ದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರ 71ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪೂರ ಸೇರಿದಂತೆ ಎಲ್ಲರೂ ಈ ಹಿಂದೆ ಒಗ್ಗಟ್ಟಿನಿಂದ ಇದ್ದಿದ್ದರೆ ಬಾದಾಮಿಯಲ್ಲಿ ಬಿಜೆಪಿ ಶಾಸಕರಾಗುತ್ತಿದ್ದರು. ಈಗಲೂ ಕಾಲಮಿಂಚಿಲ್ಲ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಬೇಕು. ಬರುವ ವಿಧಾನಸಭೆ ಚುನಾವಣೆಯಲ್ಲಿ ಪಟ್ಟಣಶೆಟ್ಟಿ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ದೊರಕಿಸಿ ಗೆಲ್ಲಿಸುವ ಹೊಣೆಗಾರಿಕೆ ನಮ್ಮದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿ, ಕಳೆದ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಜನರು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಚಿರಋಣಿಯಾಗಿದ್ದೇನೆ. ಅಭಿಮಾನಿಗಳು ತೋರಿದ ಗೌರವ ಹಾಗೂ ಆಶೀರ್ವಾದ ನನಗೆ ಅಪಾರ ಸಂತೋಷ ತಂದಿದೆ ಎಂದು ಹೇಳಿದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಸಿದ್ದನಗೌಡ ಪಾಟೀಲ, ಬಸವರಾಜ ಪಾಟೀಲ, ಹೊನ್ನಯ್ಯ ಹಿರೇಮಠ, ಸಿದ್ದಣ್ಣ ಶಿವನಗುತ್ತಿ, ಕಲ್ಲಪ್ಪ ಪಟ್ಟಣಶೆಟ್ಟಿ, ಎಫ್.ಆರ್. ಪಾಟೀಲ, ಬಿ.ಪಿ. ಹಳ್ಳೂರ, ಶಾಂತಾದೇವಿ ಪಟ್ಟಣಶೆಟ್ಟಿ, ಕುಮಾರಗೌಡ ಜನಾಲಿ, ಎನ್.ಎಸ್. ಬೊಮ್ಮನಗೌಡರ, ಹೂವಪ್ಪ ರಾಠೋಡ ಹಾಗೂ ಮುತ್ತಣ್ಣ ಕಳ್ಳಿಗುಡ್ಡ ಉಪಸ್ಥಿತರಿದ್ದರು.
ಶುಭಾಶಯಗಳ ಸುರಿಮಳೆ:
ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಆಗಮಿಸಿ ಸಿಹಿ ತಿನಿಸಿ ಪಟ್ಟಣಶೆಟ್ಟಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ