ಬೀಳಗಿ:ಸೂರ್ಯ ಉದಯಿಸುವುದು ಎಷ್ಟು ಸತ್ಯವೋ, 2028ಕ್ಕೆ ವಿಜಯೇಂದ್ರ ಸಿಎಂ ಆಗುವುದು ಅಷ್ಟೇ ಸತ್ಯ” – ಶಾಂತಗೌಡ ಪಾಟೀಲ್ ಭರ್ಜರಿ ಹೇಳಿಕೆ
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ವಿಬಿಜಿ ರಾಮ್ ಜಿ ಯೋಜನೆಯ ಜನಜಾಗೃತಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರಗೇಶ್ ನಿರಾಣಿ ಸಮ್ಮುಖದಲ್ಲೇ ಮಾತನಾಡಿದ ಶಾಂತಗೌಡ ಪಾಟೀಲ್, “ಸೂರ್ಯ ಉದಯಿಸುವುದು ಎಷ್ಟು ಸತ್ಯವೋ, 2028ಕ್ಕೆ ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗುವುದು ಅಷ್ಟೇ ಸತ್ಯ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತರಿಗೆ ಕೇಂದ್ರದ 6 ಸಾವಿರ ಸಹಾಯಧನದ ಜೊತೆಗೆ ರಾಜ್ಯದಿಂದ 4 ಸಾವಿರ ನೀಡುವ ಘೋಷಣೆ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಭಾರತವನ್ನು ಜಾಗತಿಕ ಆರ್ಥಿಕತೆಯಲ್ಲಿ 11ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಹೇಳಿದರು.
ರಾಜ್ಯದ ಎಲ್ಲೆಡೆ ಜನರು ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಯಡಿಯೂರಪ್ಪ ಅವರು ಇಲ್ಲಿ ಭೇಟಿ ನೀಡಿದ ಬಳಿಕ ಮುಖ್ಯಮಂತ್ರಿ ಆಗಿದ್ದರು; ಈಗ ವಿಜಯೇಂದ್ರ ಭೇಟಿ ನೀಡಿರುವುದರಿಂದ ಅವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತು ಗ್ರಾಮಗ್ರಾಮದಲ್ಲಿ ಕೇಳಿಬರುತ್ತಿದೆ ಎಂದರು.
ಶಾಂತಗೌಡ ಪಾಟೀಲ್ ಅವರ ಹೇಳಿಕೆಗೆ ಕಾರ್ಯಕರ್ತರು ಕೇಕೆ, ಶಿಳ್ಳೆ ಮತ್ತು ಚಪ್ಪಾಳೆಗಳೊಂದಿಗೆ ಭರ್ಜರಿ ಪ್ರತಿಕ್ರಿಯೆ ನೀಡಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ