ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಾಗಲಕೋಟೆ ಶಹರ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಫೆಬ್ರವರಿ 19ರಂದು ಸಂಜೆ ಮರಾಠಾ ಹಿತ ಚಿಂತಕರ ಸಂಘದ ಆಶ್ರಯದಲ್ಲಿ ಅಧ್ಯಕ್ಷ ಮಾರುತಿರಾವ್ ಆರ್. ಶಿಂಡೆ ನೇತೃತ್ವದಲ್ಲಿ ಕಿಲ್ಲಾ ಅಂಭಾಭವಾನಿ ದೇವಸ್ಥಾನದಿಂದ ಆರಂಭವಾದ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ನಗರ ಪ್ರಮುಖ ಮಾರ್ಗಗಳಲ್ಲಿ ಸಾಗಿತು. ಮೆರವಣಿಗೆ ಪಂಕಾ ಮಸೀದಿ ಸಮೀಪಕ್ಕೆ ಬಂದಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ನಾಗರಿಕರು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳ ಸುರಕ್ಷತೆ ಕಾಪಾಡುವ ಹಿತದೃಷ್ಟಿಯಿಂದ ಫೆಬ್ರವರಿ 19ರ ಮಧ್ಯರಾತ್ರಿಯಿಂದ ಫೆಬ್ರವರಿ 24ರ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಸಂತೋಷ ಬಿ. ಜಗಲಾಸರ ಅವರು ಆದೇಶ ಹೊರಡಿಸಿದ್ದು, ಈ ಅವಧಿಯಲ್ಲಿ ಬಾಗಲಕೋಟೆ ಶಹರ, ನವನಗರ ಮತ್ತು ವಿದ್ಯಾಗಿರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು, ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಹಾಗೂ ಅನುಮತಿ ಇಲ್ಲದೆ ಯಾವುದೇ ಸಭೆ, ಸಮಾರಂಭ, ಧರಣಿ ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಅಗತ್ಯ ಪೊಲೀಸ್ ಭದ್ರತೆ ಒದಗಿಸಲು ಬಾಗಲಕೋಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಿಗೆ ಸೂಚಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ