ಸಾವಿನಲ್ಲೂ ಒಂದಾದ ದಂಪತಿ: ಬೀಳಗಿ ತಾಲೂಕಿನ ಹೊಸರಳ್ಳಿ ಗ್ರಾಮದಲ್ಲಿ ಅಪರೂಪದ ಘಟನೆ

ಬಾಗಲಕೋಟೆ: ಜಿಲ್ಲೆ ಬೀಳಗಿ ತಾಲೂಕಿನ ಹೊಸರಳ್ಳಿ ಗ್ರಾಮದಲ್ಲಿ ಅಪರೂಪದ ಹಾಗೂ ಮನಕಲುಕುವ ಘಟನೆ ನಡೆದಿದೆ. ದಾಂಪತ್ಯ ಜೀವನದಲ್ಲಿ ಸದಾ ಒಂದಾಗಿ ಬದುಕಿದ್ದ ದಂಪತಿಗಳು ಸಾವಿನಲ್ಲೂ ಒಂದಾಗಿ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದ್ದಾರೆ.

ಹೊಸರಳ್ಳಿ ಗ್ರಾಮದ ಅಪ್ಪಣ್ಣ ಗಲಗಲಿ (84) ಮತ್ತು ಅವರ ಪತ್ನಿ ಯಲ್ಲವ್ವ ಗಲಗಲಿ (72) ಅವರು ಒಂದೇ ದಿನ ನಿಧನರಾಗಿದ್ದಾರೆ. ಅಪ್ಪಣ್ಣ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಬೀಳಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.

ಅಪ್ಪಣ್ಣ ಅವರ ಮೃತದೇಹವನ್ನು ಮನೆಗೆ ತಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ, ಅದೇ ರೀತಿಯಾಗಿ ಯಲ್ಲವ್ವ ಅವರಿಗೆ ಕೂಡ ತೀವ್ರ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಕೂಡ ಅದೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಅದೇ ದಿನ ಮೃತಪಟ್ಟಿದ್ದಾರೆ.

ಈ ಸುದ್ದಿ ತಿಳಿದು ಗ್ರಾಮಸ್ಥರು ಬೆರಗಾಗಿದ್ದು, ಹಲವು ವರ್ಷಗಳ ದಾಂಪತ್ಯ ಜೀವನ ನಡೆಸಿದ ಈ ಜೋಡಿ ಸಾವಿನಲ್ಲೂ ಒಂದಾದ ಘಟನೆ ಅಪರೂಪವೆಂದು ಹೇಳಿದ್ದಾರೆ. ಗ್ರಾಮದ ಹಿರಿಯರು ಹಾಗೂ ಕುಟುಂಬಸ್ಥರು ಸೇರಿ ಇವರಿಗೆ ಮರಳಿ ಮದುವೆಯ ಸಂಪ್ರದಾಯ ಮಾಡಿ, ನಂತರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಕಲಿಯುಗದಲ್ಲಿ ಇಂತಹ ಘಟನೆಗಳು ವಿರಳವಾಗಿದ್ದು, ಈ ದಂಪತಿಗಳ ದಾಂಪತ್ಯ ಜೀವನ ಇಂದಿನ ಪೀಳಿಗೆಗೆ ಮಾದರಿಯಾಗಿದೆ.

ಸಾವಿನಲ್ಲೂ ಒಂದಾದ ಈ ದಂಪತಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ. 

ಕಾಮೆಂಟ್‌ಗಳು