ಬೀಳಗಿ:ಗಲಗಲಿಯಲ್ಲಿ ಬೃಹತ್ ಹಿಂದೂ ಸಮಾವೇಶ–ಶೋಭಾಯಾತ್ರೆ: ಧರ್ಮ–ಸಂಸ್ಕೃತಿ ಜಾಗೃತಿಗೆ ಹೊಸ ಚೈತನ್ಯ

ಬಾಗಲಕೋಟೆ: ಜಿಲ್ಲೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಧರ್ಮ, ಸಂಸ್ಕೃತಿ ಹಾಗೂ ಸಾಮಾಜಿಕ ಏಕತೆಯನ್ನು ಪ್ರತಿಬಿಂಬಿಸುವ ಬೃಹತ್ ಹಿಂದೂ ಸಮಾವೇಶ ಮತ್ತು ಶೋಭಾಯಾತ್ರೆ ಭಕ್ತಿಭಾವ ಹಾಗೂ ಶಿಸ್ತಿನೊಂದಿಗೆ ಭವ್ಯವಾಗಿ ನೆರವೇರಿತು. 




ಗಲಗಲಿ ಮೇನ್ ಬಜಾರ್ ಅಪಾರ ಜನಸಾಗರದಿಂದ ಕಿಕ್ಕಿರಿದು, ಧರ್ಮ–ಸಂಸ್ಕೃತಿಯ ಶಕ್ತಿಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮವನ್ನು ಮಾಜಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಿ ಮಾತನಾಡಿ, ಹಿಂದೂ ಸಮಾಜದ ಆತ್ಮಬಲ, ಧಾರ್ಮಿಕ ಮೌಲ್ಯಗಳ ಸಂರಕ್ಷಣೆ, ಸಾಂಸ್ಕೃತಿಕ ಪರಂಪರೆಯ ಗೌರವ ಹಾಗೂ ಸಮಾಜದ ಏಕತೆಯ ಅಗತ್ಯತೆಯನ್ನು ಒತ್ತಿ ಹೇಳಿದರು. ಧರ್ಮ ಮತ್ತು ಸಮಾಜ ಒಟ್ಟಾಗಿ ಸಾಗಿದಾಗ ರಾಷ್ಟ್ರ ಬಲಿಷ್ಠವಾಗುತ್ತದೆ ಎಂಬ ಸಂದೇಶವನ್ನು ಅವರು ನೀಡಿದರು.

ಈ ಸಂದರ್ಭದಲ್ಲಿ ಹಿರೇಪಡಸಲಗಿಯ ಶ್ರೀ ಸಿದ್ದೇಶ್ವರ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಶಿವಪ್ರಸಾದ ಸ್ವಾಮೀಜಿಗಳು, ಜಕನೂರಿನ ಡಾ. ಮಾದುಲಿಂಗ ಮಹಾಸ್ವಾಮಿಗಳು, ಚಿಕ್ಕಗಲಗಲಿಯ ಶ್ರೀ ಜನಾರ್ದನ ಮಹಾಸ್ವಾಮಿಗಳು ಹಾಗೂ ಗಲಗಲಿಯ ಶ್ರೀ ಶಿವಾನಂದ ನೀ ಹಿರೇಮಠದ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮಕ್ಕೆ ಧಾರ್ಮಿಕ ಶೋಭೆ ಹೆಚ್ಚಿಸಿದರು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಾನಂದ ಗು. ಹಳಗಲಿ ಹಾಗೂ ಶ್ರೀ ರಮೇಶ್ ಶೇ. ಇಂಗಳಗಾಂವಿ ವಹಿಸಿದ್ದರು. ಮುಖ್ಯ ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಹ ಕಾರ್ಯವಾಹ ಶ್ರೀ ಟಿ. ಪ್ರಸನ್ನ ಆಗಮಿಸಿ ಸಂಘಟನೆ, ಶಿಸ್ತು ಹಾಗೂ ಸಾಂಸ್ಕೃತಿಕ ಜಾಗೃತಿಯ ಮಹತ್ವವನ್ನು ವಿವರಿಸಿದರು.

ಹತ್ತಾರು ಹಿಂದೂ ಸಂಘಟನೆಗಳ ಮುಖಂಡರು, ಗ್ರಾಮದ ಹಿರಿಯರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗಲಗಲಿ ಗ್ರಾಮದಲ್ಲಿ ನಡೆದ ಈ ಸಮಾವೇಶ ಧರ್ಮ, ಸಂಸ್ಕೃತಿ ಮತ್ತು ಸಮಾಜದ ಏಕತೆಗೆ ಹೊಸ ಚೈತನ್ಯ ತುಂಬಿದ ಐತಿಹಾಸಿಕ ಕ್ಷಣವಾಗಿ ಪರಿಣಮಿಸಿದೆ.

ಕಾಮೆಂಟ್‌ಗಳು