ಬಾಗಲಕೋಟೆ:ಟೀಕಿನಮಠದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಶೂನ್ಯಪೀಠಾರೋಹಣ – ಅಡ್ಡಪಲ್ಲಕ್ಕಿ ಉತ್ಸವ ಸಂಭ್ರಮ

ಬಾಗಲಕೋಟೆ:ಸಮಾಜವನ್ನೇ ಕುಟುಂಬವನ್ನಾಗಿ ಮಾಡಿಕೊಂಡು ಸೇವೆ ಸಲ್ಲಿಸುವುದು ಮಠಾಧಿಪತಿಯ ಕರ್ತವ್ಯವಾಗಿದ್ದು, ಮಠಕ್ಕೆ ಬರುವಾಗ ರಾಜಕೀಯ ವ್ಯಕ್ತಿಗಳಾಗದೆ ಭಕ್ತರಾಗಿ ಬರಬೇಕು ಎಂದು ಟೀಕಿನಮಠದ ನೂತನ ಚರಪಟ್ಟಾಧಿಕಾರಿಯಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗುರು ಶ್ರೀ ರೇವಣಸಿದ್ದ ಸ್ವಾಮಿಗಳು ಹೇಳಿದರು.

ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಚರಂತಿಮಠದ ಆವರಣದಲ್ಲಿ ರವಿವಾರ ನಡೆದ ಶೂನ್ಯಪೀಠಾರೋಹಣ ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀ ಜಡೆಯ ಶಾಂತಲಿಂಗೇಶ್ವರರ ಲಿಂಗಹಸ್ತದಿಂದ ಚರಪಟ್ಟಾಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

ಗುರುವಿನ ಆಶಯ ಮತ್ತು ಶ್ರಮವನ್ನು ಸ್ಮರಿಸಿಕೊಂಡು ಸಮಾಜದ ಮಗುವಾಗಿ ತಮ್ಮ ನಡುವೆ ಉಳಿದು ಸಮಾಜವನ್ನು ಕುಟುಂಬವನ್ನಾಗಿ ಮಾಡಿಕೊಂಡು ಸೇವೆ ಸಲ್ಲಿಸುವುದಾಗಿ ತಿಳಿಸಿದರು. ಬಸವಣ್ಣ, ನಿಜಗುಣ ಸ್ವಾಮಿಗಳ ಮಾರ್ಗದಲ್ಲಿ ನಡೆದು ಟೆಂಗಿನಮಠ–ಟೀಕಿನಮಠದ ಪರಂಪರೆಯನ್ನು ಮುಂದುವರಿಸಲು ಭಕ್ತರ ಸಹಕಾರ ಅಗತ್ಯವಿದೆ ಎಂದರು. ಮಠಕ್ಕೆ ಬರುವಾಗ ರಾಜಕೀಯವನ್ನಲ್ಲ, ಭಕ್ತಿಯನ್ನು ತರಬೇಕು ಎಂದು ಕರೆ ನೀಡಿದರು.

ಪಟ್ಟಾಧಿಕಾರ ಸಮಿತಿಯ ಗೌರವಾಧ್ಯಕ್ಷರಾದ ಚರಂತಿಮಠದ ಪ್ರಭುಸ್ವಾಮಿಗಳು ಮಾತನಾಡಿ, ಗುರು ತನ್ನ ಶಕ್ತಿ ಮತ್ತು ಸ್ಥಾನವನ್ನು ಶಿಷ್ಯನಿಗೆ ನೀಡುವುದೇ ಶೂನ್ಯಪೀಠಾರೋಹಣದ ಅರ್ಥವಾಗಿದ್ದು, ಶೂನ್ಯಭಾವದಿಂದ ಸಮಾಜಸೇವೆಗೆ ಶರಣಾಗುವುದು ಮಠಪರಂಪರೆಯ ಉದ್ದೇಶ ಎಂದು ಹೇಳಿದರು. ಪಟ್ಟಾಧಿಕಾರದ ಬಳಿಕ ಮಲ್ಲಿಕಾರ್ಜುನ ದೇಶಿಕರು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗುರು ರೇವಣಸಿದ್ದಸ್ವಾಮಿಗಳಾಗಿ ಸಮಾಜಸೇವೆಗೆ ಮುಂದಾಗಲಿದ್ದಾರೆ ಎಂದರು.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಟೆಂಗಿನಮಠ–ಟೀಕಿನಮಠ ಸಂಪ್ರದಾಯಬದ್ಧ ಮಠವಾಗಿದ್ದು, ಸಮಾಜದ ಏಳಿಗೆಗಾಗಿ ಮಠಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು. ಬಸವಣ್ಣ ಮತ್ತು ಅಲ್ಲಮ ಪ್ರಭುಗಳ ಕಾಯಕ ತತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ತಿಳಿಸಿದರು.

ಚರಪಟ್ಟಾಧಿಕಾರ ಸಮಿತಿ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮಾತನಾಡಿ, ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರದಿಂದ ಬಾಗಲಕೋಟೆಯಲ್ಲಿ ಧಾರ್ಮಿಕ ಜಾಗೃತಿ ಮೂಡಿದೆ ಎಂದರು. ತಪಸ್ಸು, ಪೂಜಾನಿಷ್ಠೆ ಮತ್ತು ಅನುಷ್ಠಾನದ ಮೂಲಕ ಸ್ವಾಮಿಗಳು ಸಮಾಜದ ವಿಶ್ವಾಸ ಗಳಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ವಿವಿಧ ಮಠಗಳ ಪೂಜ್ಯರು, ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ಷಟಸ್ಥಳ ಬ್ರಹ್ಮೋಪದೇಶ:.

ಬೆಳಗಿನ ಜಾವ ಟೀಕಿನಮಠದಲ್ಲಿ ನಿಂಬಾಳ ಮತ್ತು ಬೆಂಗಳೂರಿನ ಸಮಾಧಾನ ಆಶ್ರಮದ ಮೌನಯೋಗಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಮಲ್ಲಿಕಾರ್ಜುನ ಪೂಜ್ಯರಿಗೆ ಷಟಸ್ಥಳ ಬ್ರಹ್ಮೋಪದೇಶ ಶಾಸ್ತ್ರೋಕ್ತವಾಗಿ ನೆರವೇರಿತು.

ಅಡ್ಡಪಲ್ಲಕ್ಕಿ ಉತ್ಸವ ಸಂಭ್ರಮ:

ಬೀಳೂರು ಅಜ್ಜನ ಗುಡಿಯಿಂದ ಆರಂಭವಾದ ಅಡ್ಡಪಲ್ಲಕ್ಕಿ ಉತ್ಸವ ಬಸವೇಶ್ವರ ವೃತ್ತ, ಮಹಾತ್ಮಾ ಗಾಂಧಿ ರಸ್ತೆ, ಪೊಲೀಸ್ ಚೌಕಿ ಹಾಗೂ ಅಡತ ಬಜಾರ್ ಮಾರ್ಗವಾಗಿ ಟೀಕಿನಮಠಕ್ಕೆ ತಲುಪಿತು. ಮಹಿಳೆಯರ 1008 ಕುಂಭಮೇಳ ಹಾಗೂ ವಿವಿಧ ಸಾಂಸ್ಕೃತಿಕ ತಂಡಗಳು ಉತ್ಸವದ ಕಂಗೊಳ ಹೆಚ್ಚಿಸಿದವು. ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.


ಕಾಮೆಂಟ್‌ಗಳು