ಬಾಗಲಕೋಟೆ:ಅನುಮಾನಾಸ್ಪದಗಳಿಗೆ ಅವಕಾಶ ನೀಡದೇ ಉಪಚುನಾವಣೆ ನಡೆಸಿ : ರಾಮಪ್ರಶಾಂತ ಮನೋಹರ

ಬಾಗಲಕೋಟೆ, :ಮುಂಬರುವ ೨೪–ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯನ್ನು ಯಾವುದೇ ಅನುಮಾನಾಸ್ಪದಗಳಿಗೆ ಅವಕಾಶ ನೀಡದೇ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಉಪಚುನಾವಣೆಯ ರೋಲ್ ಆಬ್ಸರ್ವರ್ ರಾಮಪ್ರಶಾಂತ ಮನೋಹರ ಸೂಚಿಸಿದರು.

ಸೋಮವಾರ  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಪೂರ್ವಸಿದ್ಧತೆ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾರರ ಪಟ್ಟಿ ತಯಾರಿಕೆಯಿಂದಲೇ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತದೆ. ಆರಂಭದಲ್ಲಿಯೇ ಲೋಪದೋಷಗಳಿದ್ದಲ್ಲಿ ರಾಜಕೀಯ ಪಕ್ಷಗಳು ಗಮನಕ್ಕೆ ತರಬೇಕು. ಆಗ ತಕ್ಷಣ ದೋಷಗಳನ್ನು ಸರಿಪಡಿಸಿ ಚುನಾವಣೆ ಸುಗಮವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

೨೦೨೬ ಜನವರಿ ೩ ರಿಂದ ೩೧ ರವರೆಗೆ

ಫಾರಂ–೬ : ೪,೭೦೩

ಫಾರಂ–೭ : ೧,೮೨೧

ಫಾರಂ–೮ (ತಿದ್ದುಪಡಿ) : ೫,೭೦೦

ಫಾರಂ–೮ (ವರ್ಗಾವಣೆ) : ೩೧೩

ಒಟ್ಟಾರೆ ೧೨,೫೩೭ ಅರ್ಜಿಗಳು ಸ್ವೀಕೃತವಾಗಿವೆ. ಮತದಾರರ ಪಟ್ಟಿ ಸಂಬಂಧ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಫೆಬ್ರವರಿ ೭ ರವರೆಗೆ ಕಾಲಾವಕಾಶವಿದ್ದು, ಫೆಬ್ರವರಿ ೧೪ ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ್ ವಾಸುದೇವ ಸ್ವಾಮಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು