ಬಾಗಲಕೋಟೆ:ರಾಜಕೀಯ ಹೇಳಿಕೆಗಳಿಂದ ಆತಂಕ: ವ್ಯಾಪಾರಸ್ಥರ ಪರ ಮನವಿ

ಬಾಗಲಕೋಟೆ: ನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರ ನಡೆಸುತ್ತಿರುವ ಕಡು ಬಡ ಕುಟುಂಬಗಳಿಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ಕ್ರಮ ಕೈಗೊಳ್ಳುವಂತೆ ಆನಂದ ಎಂ. ರಾಠೋಡ್  ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಮಾಜಿ ಶಾಸಕ ವೀರಣ್ಣ ಸಿ. ಚರಂತಿಮಠ ಅವರು ಬೀದಿ ವ್ಯಾಪಾರಸ್ಥರ ಕುರಿತು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಹೇಳಿಕೆಗಳಿಂದ ವ್ಯಾಪಾರಸ್ಥರಲ್ಲಿ ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಗರದ ನವನಗರ ಹಾಗೂ ಬಾಗಲಕೋಟೆ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್, ತಹಶೀಲ್ದಾರ ಕಚೇರಿ, ನ್ಯಾಯಾಲಯ, ಎಪಿಎಂಸಿ, ವಿದ್ಯಾಗಿರಿ ಸರ್ಕಲ್ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳ ಪಾದಚಾರಿ ಮಾರ್ಗಗಳಲ್ಲಿ ರೈಸ್ ಅಂಗಡಿ, ಎಳನೀರು ಸೇರಿದಂತೆ ಸಣ್ಣ ವ್ಯಾಪಾರಗಳನ್ನು ನಡೆಸುತ್ತಿರುವ ಬಡ ಕುಟುಂಬಗಳು ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಹಾಗೂ ಜೀವನ ನಿರ್ವಹಣೆಗೆ ಅವಲಂಬಿಸಿಕೊಂಡಿವೆ ಎಂದು ಹೇಳಲಾಗಿದೆ.

ಈ ವ್ಯಾಪಾರಸ್ಥರು ಆರೋಗ್ಯ, ಪೊಲೀಸ್ ಸೇರಿದಂತೆ ಸಂಬಂಧಿತ ಇಲಾಖೆಗಳ ಅನುಮತಿ ಪಡೆದು ಸರ್ಕಾರ ವಿಧಿಸಿರುವ ಶುಲ್ಕಗಳನ್ನು ಪಾವತಿಸಿ ವ್ಯಾಪಾರ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆಯವರು ತಿಂಗಳಿಗೊಮ್ಮೆ ಆಹಾರ ಪರಿಶೀಲನೆ ನಡೆಸಿ ವರದಿ ನೀಡುತ್ತಿರುವುದಾಗಿ ಉಲ್ಲೇಖಿಸಲಾಗಿದೆ.

ಆದ್ದರಿಂದ ಯಾವುದೇ ರಾಜಕೀಯ ಹೇಳಿಕೆಗಳನ್ನು ಪರಿಗಣಿಸದೆ, ಬೀದಿ ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಹಾಗೂ ವಿಷಯವನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕೆಂದು ಆನಂದ ಎಂ. ರಾಠೋಡ್ ಮನವಿಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳು