ಬಾಗಲಕೋಟೆ:ಹಾವು & ನಾಯಿ ಕಡಿತ ಪ್ರಕರಣ ಕಡಿಮೆ ಮಾಡಲು ಕ್ರಮವಹಿಸಿ : ಡಿಸಿ

ಬಾಗಲಕೋಟೆ, ಫೆ.13: ಜಿಲ್ಲೆಯಲ್ಲಿ ಹಾವು ಹಾಗೂ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾವು ಕಡಿತದಂತಹ ತುರ್ತು ಪರಿಸ್ಥಿತಿಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಒದಗಿಸುವುದು ಅತ್ಯವಶ್ಯಕ ಎಂದು ಹೇಳಿದರು. ಹಾವು ಕಡಿದಾಗ ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಜೀವಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2024ರಲ್ಲಿ 371 ಹಾವು ಕಡಿತ ಪ್ರಕರಣಗಳಲ್ಲಿ 6 ಮಂದಿ ಮೃತಪಟ್ಟಿದ್ದರೆ, 2025ರಲ್ಲಿ 586 ಪ್ರಕರಣಗಳಲ್ಲಿ 4 ಮಂದಿ ಮೃತಪಟ್ಟಿದ್ದಾರೆ. 2026ರ ಜನವರಿ ತಿಂಗಳಲ್ಲಿ 37 ಪ್ರಕರಣಗಳು ದಾಖಲಾಗಿದ್ದು, ಜಮಖಂಡಿ ತಾಲೂಕಿನ ಕುಂಬಾರಹಳ್ಳಿ ಗ್ರಾಮದ 40 ವರ್ಷದ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಲಾಯಿತು. ಪ್ರತಿ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಆಂಟಿ-ವೆನಮ್ ಇಂಜೆಕ್ಷನ್ ಲಭ್ಯವಿರುವಂತೆ ನೋಡಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ.ಎನ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ನಾಯಿ ಕಡಿತ ಪ್ರಕರಣಗಳ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಇತ್ತೀಚೆಗೆ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿದ್ದು, ಬೀದಿ ನಾಯಿಗಳ ಬಗ್ಗೆ ಸಾರ್ವಜನಿಕರು ಹಾಗೂ ಮಕ್ಕಳು ಜಾಗೃತಿಯಿಂದ ಇರಲು ಸೂಕ್ತ ಅರಿವು ಮೂಡಿಸುವ ಅಗತ್ಯವಿದೆ ಎಂದರು. ನಾಯಿ ಕಡಿತ ಪ್ರಕರಣಗಳಲ್ಲಿ ಈಗಾಗಲೇ ಇಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಪಶುಪಾಲನಾ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು ಹಾಗೂ ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹೇಳಿದರು.

ವಿಷಕಾರಿ ಹಾವು ಕಚ್ಚಿದಾಗ ಹೆದರದೇ ಸಮಾಧಾನದಿಂದ ಇರಬೇಕು. ರಕ್ತ ಪರಿಚಲನೆ ತಡೆಯುವಂತಹ ಕೈಗಡಿಯಾರ, ಬಳೆ, ಉಂಗುರಗಳನ್ನು ತೆಗೆಯಬೇಕು. ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ಗಾಯದ ಮೇಲೆ ಬಟ್ಟೆ ಕಟ್ಟುವುದು ಅಥವಾ ಗಾಯವನ್ನು ಕುಯ್ಯುವುದು ಮಾಡಬಾರದು. ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು.

ಆಸ್ಪತ್ರೆಗಳಲ್ಲಿ ಔಷಧಿಗಳ ಲಭ್ಯತೆ, ಸಿಬ್ಬಂದಿಗಳ ಕೊರತೆ ಹಾಗೂ ಸೂಕ್ತ ಚಿಕಿತ್ಸೆಗಳ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಚಿಕಿತ್ಸೆಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಸೂಕ್ತ ಚಿಕಿತ್ಸೆ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ.ಎನ್., ಜಿಲ್ಲಾ ಶಸ್ತ್ರಚಿಕಿತ್ಸಕ ಮಹೇಶ ಕೋಣಿ, ಜಿಲ್ಲಾ ಸಮೀಕ್ಷಣಾಧಿಕಾರಿ ಕರೇನ್ನವರ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ತಾಲೂಕಿನ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು