ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಕೈಯಲ್ಲಿ ಹಿಡಿದಿರುವ ಪ್ರತಿಯೊಬ್ಬರೂ ಕ್ಷಣಕ್ಷಣದ ಸುದ್ದಿಗಳನ್ನು ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು, ಟಿವಿ ಚಾನೆಲ್‌ಗಳು ಹಾಗೂ ಇಂಟರ್ನೆಟ್ ಮೂಲಕ ಮಾಹಿತಿಯ ಹರಿವು ವೇಗವಾಗಿ ನಡೆಯುತ್ತಿದೆ. ಆದರೆ ಒಂದು ಕಾಲದಲ್ಲಿ ದೇಶ ಮತ್ತು ಪ್ರಪಂಚದ ಸುದ್ದಿಗಳನ್ನು ತಿಳಿಯಲು ಜನರು ಸಂಪೂರ್ಣವಾಗಿ ಅವಲಂಬಿಸಿಕೊಂಡಿದ್ದ ಪ್ರಮುಖ ಮಾಧ್ಯಮವೇ ರೇಡಿಯೋ.
ನಮ್ಮ ಅಜ್ಜ-ಅಜ್ಜಿಯರು ಬೆಳಿಗ್ಗೆ ಹಾಗೂ ಸಂಜೆ ರೇಡಿಯೋ ಮುಂದೆ ಕೂತು ಸುದ್ದಿಗಳು, ಭಕ್ತಿ ಕಾರ್ಯಕ್ರಮಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಕೇಳುತ್ತಿದ್ದ ಕಾಲ ಇಂದಿಗೂ ನೆನಪಿನ ಪುಟಗಳಲ್ಲಿ ಉಳಿದಿದೆ.
ಆಧುನಿಕ ಯುಗದಲ್ಲೂ ರೇಡಿಯೋಗೆ ಸ್ಥಾನ
ಆಧುನಿಕ ತಂತ್ರಜ್ಞಾನದ ಹೊಡೆತದ ನಡುವೆಯೂ ರೇಡಿಯೋ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಕಾಪಾಡಿಕೊಂಡಿದೆ. ಸರಳತೆ, ಸುಲಭ ಲಭ್ಯತೆ ಮತ್ತು ಎಲ್ಲೆಡೆ ತಲುಪುವ ಸಾಮರ್ಥ್ಯದಿಂದ ರೇಡಿಯೋ ಇಂದಿಗೂ ಜನಮನ ಗೆದ್ದಿದೆ. ವಿಶೇಷವಾಗಿ ಎಫ್‌ಎಂ ರೇಡಿಯೋಗಳ ಉದಯದಿಂದ ಸಂಗೀತ, ಸಂವಾದ, ಸಾಮಾಜಿಕ ಜಾಗೃತಿ ಮತ್ತು ಸ್ಥಳೀಯ ಸುದ್ದಿಗಳ ಮೂಲಕ ಮನೋರಂಜನೆಯ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಂಡಿದೆ.
ಈ ಮಹತ್ವವನ್ನು ಸ್ಮರಿಸಲು ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ. ರೇಡಿಯೋ ಮಾಧ್ಯಮದ ಪ್ರಭಾವ, ಅದರ ಸಾಮಾಜಿಕ ಹೊಣೆಗಾರಿಕೆ ಮತ್ತು ಮಾಹಿತಿ ಹಂಚುವ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ರೇಡಿಯೋ ದಿನದ ಇತಿಹಾಸ
1946ರ ಫೆಬ್ರವರಿ 13ರಂದು ಅಮೆರಿಕಾದಲ್ಲಿ ಮೊದಲ ರೇಡಿಯೋ ಪ್ರಸರಣ ಸಂದೇಶವನ್ನು ಕಳುಹಿಸಲಾಯಿತು. ಈ ದಿನವನ್ನು ನೆನಪಿನಲ್ಲಿಟ್ಟುಕೊಂಡು, 2010ರಲ್ಲಿ ಸ್ಪೇನ್‌ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ವಿಶ್ವ ರೇಡಿಯೋ ದಿನ ಆಚರಣೆಗೆ ಯುನೆಸ್ಕೋಗೆ ಪ್ರಸ್ತಾಪಿಸಿತು.
2012ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಫೆಬ್ರವರಿ 13ನ್ನು ಅಧಿಕೃತವಾಗಿ ವಿಶ್ವ ರೇಡಿಯೋ ದಿನವಾಗಿ ಘೋಷಿಸಲಾಯಿತು. ಆಗಿನಿಂದ ಪ್ರತಿವರ್ಷ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ.
ಭಾರತದಲ್ಲಿ ರೇಡಿಯೋದ ಪಯಣ
ಭಾರತದಲ್ಲಿ ರೇಡಿಯೋ ಪ್ರಸಾರದ ಇತಿಹಾಸವೂ ಬಹಳ ಹಳೆಯದು. 1923ರಲ್ಲಿ ಬಾಂಬೆ ರೇಡಿಯೋ ಕ್ಲಬ್ ದೇಶದ ಮೊದಲ ರೇಡಿಯೋ ಪ್ರಸಾರ ನಡೆಸಿತು. ನಂತರ ಕಲ್ಕತ್ತಾದಲ್ಲೂ ರೇಡಿಯೋ ಕ್ಲಬ್ ಆರಂಭವಾಯಿತು.
1927ರಲ್ಲಿ ಭಾರತೀಯ ಪ್ರಸಾರ ಕಂಪನಿ ಸ್ಥಾಪನೆಯಾದರೂ ಕೆಲವೇ ವರ್ಷಗಳಲ್ಲಿ ಅದು ನಷ್ಟ ಅನುಭವಿಸಿತು. ಬಳಿಕ 1930ರಲ್ಲಿ ಭಾರತೀಯ ಪ್ರಸಾರ ಸೇವೆ ಪ್ರಾಯೋಗಿಕವಾಗಿ ಆರಂಭವಾಯಿತು. 1936ರ ಜೂನ್ 8ರಂದು ಆಲ್ ಇಂಡಿಯಾ ರೇಡಿಯೋ ಪ್ರಾರಂಭವಾಗಿ ನಂತರ ‘ಆಕಾಶವಾಣಿ’ಯಾಗಿ ದೇಶದ ಪ್ರಮುಖ ಮಾಹಿತಿ ಮತ್ತು ಮನೋರಂಜನಾ ಮಾಧ್ಯಮವಾಗಿ ಬೆಳೆದಿತು.
ರೇಡಿಯೋದ ಮಹತ್ವ
ರೇಡಿಯೋ ಅತ್ಯಂತ ಹಳೆಯ ಮತ್ತು ಪ್ರಭಾವಶಾಲಿ ಸಮೂಹ ಮಾಧ್ಯಮಗಳಲ್ಲಿ ಒಂದಾಗಿದೆ. ಇಂದಿಗೂ ಇದು ಮುಕ್ತ ಮತ್ತು ವಿಶ್ವಾಸಾರ್ಹ ಮಾಹಿತಿ ಮಾಧ್ಯಮವಾಗಿದೆ. ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಅಥವಾ ಟಿವಿ ಸೌಲಭ್ಯಗಳಿಲ್ಲದಿದ್ದರೂ ರೇಡಿಯೋ ಸುಲಭವಾಗಿ ತಲುಪುತ್ತದೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜನರಿಗೆ ಮಾಹಿತಿ ತಲುಪಿಸುವ ಸಾಮರ್ಥ್ಯ ಇದಕ್ಕಿದೆ.
ಕೃಷಿ ಮಾಹಿತಿ, ಶಿಕ್ಷಣ, ಆರೋಗ್ಯ ಜಾಗೃತಿ, ಸಂಗೀತ ಮತ್ತು ಸಂಸ್ಕೃತಿ ಸೇರಿದಂತೆ ಅನೇಕ ವಿಷಯಗಳನ್ನು ಜನರಿಗೆ ತಲುಪಿಸುವಲ್ಲಿ ರೇಡಿಯೋ ಮಹತ್ವದ ಪಾತ್ರ ವಹಿಸುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ರೇಡಿಯೋ ಅತ್ಯಂತ ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದೆ.
ಆಚರಣೆಯ ಉದ್ದೇಶ
ವಿಶ್ವ ರೇಡಿಯೋ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ರೇಡಿಯೋದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಯುವ ಸಮುದಾಯವನ್ನು ರೇಡಿಯೋ ಬಳಕೆಗೆ ಪ್ರೋತ್ಸಾಹಿಸುವುದು. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ವಿಚಾರಗೋಷ್ಠಿಗಳು ಮತ್ತು ಚರ್ಚಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ .
ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾದರೂ ರೇಡಿಯೋದ ಮಹತ್ವ ಕಡಿಮೆಯಾಗಿಲ್ಲ. ಸರಳತೆ, ವಿಶ್ವಾಸಾರ್ಹತೆ ಮತ್ತು ವ್ಯಾಪಕ ತಲುಪುವಿಕೆ ರೇಡಿಯೋವನ್ನು ಶಾಶ್ವತ ಮಾಧ್ಯಮವನ್ನಾಗಿ ಉಳಿಸಿದೆ. ಕಾಲ ಬದಲಾದರೂ ಜನಮನಗಳಲ್ಲಿ ರೇಡಿಯೋದ ಸ್ಥಾನ ಅಚಲವಾಗಿದೆ. ವಿಶ್ವ ರೇಡಿಯೋ ದಿನವು ಈ ಮಾಧ್ಯಮದ ಶಕ್ತಿ ಮತ್ತು ಸೇವೆಯನ್ನು ಸ್ಮರಿಸುವ ಮಹತ್ವದ ದಿನವಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ