ಬಾಗಲಕೋಟೆ:ಕಲ್ಲುತೂರಾಟ ರಾಜಕೀಯ ಕಿಚ್ಚು: ಶಾಂತಿಗೆ ಕರೆ ನೀಡಿದ ಸಚಿವ ತಿಮ್ಮಾಪುರ

ಬಾಗಲಕೋಟೆ: ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಗೆ ಸಂಬಂಧಿಸಿ ಎಲ್ಲರೂ ಖಂಡನೆ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಚೋದನೆ ಕೊಟ್ಟರು ಎಂದು ಒಂದು ಕಡೆ, ಕಲ್ಲು ತೂರಿದರು ಎಂದು ಮತ್ತೊಂದು ಕಡೆ ಆರೋಪಗಳು ಕೇಳಿಬರುತ್ತಿವೆ. ಯಾರು ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗುತ್ತದೆ. ತಪ್ಪಿತಸ್ಥರ ವಿರುದ್ಧ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.

ಮುಂದೆ ಬಾಗಲಕೋಟೆಯಲ್ಲಿ ಶಾಂತತೆಯಿಂದ ಜೀವನ ಸಾಗಬೇಕು ಎಂಬುದು ಎಲ್ಲರ ಒಕ್ಕೊರಲಿನ ಅಭಿಪ್ರಾಯವಾಗಿದೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಅನಾವಶ್ಯಕವಾಗಿ ಯಾವುದೇ ಹಿಂದೂ ಅಥವಾ ಮುಸ್ಲಿಂ ಸಮುದಾಯದವರಿಗೆ ತೊಂದರೆ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಯಾವುದೇ ಧರ್ಮ ಹಾಗೂ ಜಾತಿಯ ಆಚರಣೆಗಳಿಗೆ ಅಡೆತಡೆ ಮಾಡುವುದು ತಪ್ಪು. ಬಾಗಲಕೋಟೆ ಶಾಂತಿಯುತವಾಗಿ ಮುಂದುವರಿಯಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ತಮ್ಮ ತಮ್ಮ ಸಮುದಾಯದ ಮುಖಂಡರು ಜಾಗ್ರತೆ ವಹಿಸಬೇಕು ಎಂದು ಮುಖಂಡರ ಸಭೆಯಲ್ಲಿ ಸಲಹೆ ನೀಡಲಾಗಿದೆ ಎಂದು ಹೇಳಿದರು.

ಕಾಮೆಂಟ್‌ಗಳು