ನಿರ್ಬಂಧದ ಮರುದಿನವೇ ಬಾಗಲಕೋಟೆಗೆ ಮುತಾಲಿಕ್ ಎಂಟ್ರಿ – ಜಿಲ್ಲಾಡಳಿತಕ್ಕೆ ಸವಾಲ್!

 ಬಾಗಲಕೋಟೆ:ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲೆಗೆ ಪ್ರವೇಶ ನಿರ್ಬಂಧ ಹೇರಿದ ಮರುದಿನವೇ ಬಾಗಲಕೋಟೆ ನಗರಕ್ಕೆ ಎಂಟ್ರಿ ನೀಡಿದ್ದಾರೆ. ಬೆಂಗಳೂರಿನಿಂದ ರೈಲು ಮೂಲಕ ನಗರಕ್ಕೆ ಆಗಮಿಸಿದ ಮುತಾಲಿಕ್, ಜಿಲ್ಲಾಡಳಿತದ ನಿರ್ಬಂಧ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಶಿವಾಜಿ ಮಹಾರಾಜರ ಮೆರವಣಿಗೆ ವೇಳೆ ಕಲ್ಲು ತೂರಿದವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ, ಆದರೆ ದೇಶಭಕ್ತಿ ಮತ್ತು ಜಾಗೃತಿ ಮೂಡಿಸುವವರನ್ನೇ ಗಡಿಪಾರು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸರ್ಕಾರ ಸ್ವಾತಂತ್ರ್ಯ ಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನಾನು ಮಾತನಾಡಿದ ನಂತರ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ನನ್ನ ಮೇಲೆ ಕೇಸ್ ಹಾಕಿ. ಆದರೆ ಮಾತನಾಡಲು ಅವಕಾಶ ಕೊಡದೇ ಇದ್ದರೆ ಅದು ಸಂವಿಧಾನ ವಿರೋಧಿ ನಡೆ,” ಎಂದು ಹೇಳಿದರು. ಡಾ. ಅಂಬೇಡ್ಕರ್ ನೀಡಿದ ಮಾತಿನ ಸ್ವಾತಂತ್ರ್ಯವನ್ನು ಕಾಪಾಡಬೇಕು ಎಂದೂ ಹೇಳಿದರು.

ಇಂದು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದೇನೆ, ನಾಳೆಯ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತೇನೆ. ಬಂಧನ ಮಾಡಿದರೂ ಎದುರಿಸುತ್ತೇನೆ ಎಂದು ಜಿಲ್ಲಾಡಳಿತಕ್ಕೆ ಮುತಾಲಿಕ್ ಸವಾಲು ಹಾಕಿದರು.

ಕಾಮೆಂಟ್‌ಗಳು