ಧಾರವಾಡ: ಸಂಪೂರ್ಣ ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ಬದ್ಧ – ಸಚಿವ ಆರ್.ಬಿ. ತಿಮ್ಮಾಪೂರ

ಧಾರವಾಡ: ಇಂದು ಧಾರವಾಡದಲ್ಲಿ ನಡೆದ 2ನೇ ವರ್ಷದ ರಾಜ್ಯಮಟ್ಟದ ಮಾದಿಗ ವಕೀಲರ ಸಮ್ಮೇಳನ ನಡೆಯಿತು.  ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪೂರ ಅವರು ಭಾಗವಹಿಸಿ, ಸಂಪೂರ್ಣ ಒಳಮೀಸಲಾತಿ ಜಾರಿಗಾಗಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.




ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡಿದ ಸಚಿವ ತಿಮ್ಮಾಪೂರ, “ಮಾದಿಗ ಸಮುದಾಯಕ್ಕೆ ಸಂಪೂರ್ಣ ಒಳಮೀಸಲಾತಿ ದೊರಕುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಇದು ಕೇವಲ ಉದ್ಯೋಗಾವಕಾಶಗಳಿಗೆ ಸೀಮಿತವಾಗದೇ, ಸಮಾಜದಲ್ಲಿ ಸಮಾನತೆ, ಗೌರವ ಮತ್ತು ಅವಕಾಶಗಳ ಸಮನ್ಯಾಯ ವಿತರಣೆಯ ಸಂಕೇತವಾಗಿದೆ. ನಮ್ಮ ಸರ್ಕಾರ ಒಳಮೀಸಲಾತಿಯನ್ನು ಪೂರ್ಣವಾಗಿ ಜಾರಿಗೊಳಿಸಲು ಕಾನೂನು, ಆಡಳಿತಾತ್ಮಕ ಹಾಗೂ ರಾಜಕೀಯ ಎಲ್ಲ ಮಟ್ಟಗಳಲ್ಲಿ ಶ್ರಮಿಸುತ್ತಿದೆ,” ಎಂದು ಹೇಳಿದರು.

ಮಾದಿಗ ವಕೀಲರು ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಅವರ ಸಾಮರ್ಥ್ಯ, ಒಗ್ಗಟ್ಟು ಮತ್ತು ಸಂಘಟನೆಯೇ ಈ ಹೋರಾಟದ ಬಲ ಎಂದು ಸಚಿವರು ಹೇಳಿದರು. “ಈ ಸಮ್ಮೇಳನದಿಂದ ಮೂಡುವ ಒಗ್ಗಟ್ಟು ಶೀಘ್ರದಲ್ಲೇ ಸ್ಪಷ್ಟ ಫಲಿತಾಂಶ ನೀಡಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಮಾದಿಗ ಸಮುದಾಯದ ವಕೀಲರು, ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳ ಮುಖಂಡರು ಹಾಗೂ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು