ಬಾಗಲಕೋಟೆ:ದೇಶಿ ತಳಿ ಉಳಿಸಿ ಬೆಳೆಸುವ ಕೆಲಸವಾಗಲಿ : ಸಚಿವ ತಿಮ್ಮಾಪೂರ*

ಬಾಗಲಕೋಟೆ: ರೈತರು ತಲೆತಲಾಂತರದಿಂದ ಬೆಳೆಯಲಾಗುತ್ತಿರುವ ದೇಶಿ ತಳಿಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.


         ನವನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಮತು ಕೃಷಿ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದು ಕಡೆ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಕೊಡಬೇಕು. ಇನ್ನೊಂದು ಕಡೆ ಅದಕ್ಕೆ ತಕ್ಕಂತೆ ಆಹಾರ ಉತ್ಪಾದನೆ ಮಾಬೇಕಿದೆ. ಇದರ ನಡುಗೆ ಆಹಾರಧಾನ್ಯದಲ್ಲಿ ರುಚಿಯನ್ನು ಕಳೆದುಕೊಳ್ಳಲಾಗುತ್ತಿದೆ ಎಂದರು.

        ಹೆಚ್ಚಿನ ಉತ್ಪಾದನೆ ಮಾಡುವ ಉದ್ದೇಶದಿಂದ ಅನೇಕ ರಾಸಾಯನಿಕಗಳನ್ನು ಸಿಂಪರಣೆ ಮಾಡಲಾಗುತ್ತಿದೆ. ಇದರಿಂದ ಮಣ್ಣಿನ ಫಲವತ್ತತೆ ಕಳೆದುಕೊಳ್ಳುವದರ ಜೊತೆಗೆ ರುಚಿ ಕೂಡಾ ಹಾಳುಮಾಡಿಕೊಳ್ಳಲಾಗುತ್ತಿದೆ. ಆರೋಗ್ಯವಂತ ಜೀವನಕ್ಕೆ ಬೇಕಾಗುವ ಆಹಾರ ಉತ್ಪಾದನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ದೇಶಿ ತಳಿಗಳನ್ನು ಉಳಿಸಿ ಸಂರಕ್ಷಿಸುವ ಕೆಲಸ ಮಾಡುತ್ತಿದೆ. ರೈತರಿಗೆ ದೇಶಿ ತಳಿಗಳ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ತರಬೇತಿ ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

        ಅಂದಾಜು 99.74 ಲಕ್ಷ ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾಗಿ ಕೃಷಿ ತರಬೇತಿ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ತರಬೇತಿ ಕೇಂದ್ರದಲ್ಲಿ ಊಟ ವಸತಿಯೊಂದಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೇ ಜಿಲ್ಲೆಯಲ್ಲಿ ರೈತರು ಬೆಳೆಯುವ ತರಕಾರಿ, ಹಣ್ಣು ಸೇರಿದಂತೆ ಇತರೆ ಬೆಳೆಗಳು ಹಾಳಾಗದಂತೆ ಶೇಖರಿಸಲು ನಬಾರ್ಡ ಯೋಜನೆಯಡಿ 9.51 ಕೋಟಿ ರೂ.ಗಳ ವೆಚ್ಚದಲ್ಲಿ 2500 ಮೆಟ್ರಿಕ್ ಟನ್ ಸಾಮಥ್ರ್ಯವುಳ್ಳ ಶೀತಲ ಘಟಕ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

          ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ಕಬ್ಬು ಬೆಳೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ 14 ಸಕ್ಕರೆ ಕಾರ್ಖಾನೆ ವ್ಯಾಪ್ತಿಯಡಿ 1000 ಹೆಕ್ಟೆರ್ ಪ್ರದೇಶದಲ್ಲಿ ರೈತರನ್ನು ಆಯ್ಕೆ ಮಾಡಿಕೊಂಡು ಹನಿ ನೀರಾವರಿ ಘಟಕ ಅನುಷ್ಠಾನ, ಕಬ್ಬಿನ ಬೆಳೆಯಲ್ಲಿ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಮೂಲಕ ಕಬ್ಬು ಬೆಳೆ ಪ್ರಾತ್ಯಕ್ಷಿಕೆ ಮಾಡಲಾಗುತ್ತಿದೆ. ಇದರಿಂದ ನೀರಿನ ಮಿತವ್ಯಯ ಬಳಕೆ, ರಸಗೊಬ್ಬರ ಉಳಿತಾಯ, ಕೀಟನಾಶಕದ ಅವಲಂಬನೆ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು.

         ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಬಿವೃದ್ದಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಿಸುವ ಅಗತ್ಯವಿದೆ. ಒಂದು ಜನಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ ಭೂಮಿ ಹೆಚ್ಚಳವಾಗುವದಿಲ್ಲ. ಇದನ್ನು ಅರಿಯಬೇಕಿದೆ. ಹೊಸ ಹೊಸ ತಳಿಗಳ ಸಂಶೋಧನೆಯಿಂದ ಉತ್ಪಾದನೆ ಪ್ರಮಾಣ ಹೆಚ್ಚಿಸಿ ಈಗ ಬೇರೆ ದೇಶಕ್ಕೆ ರಪ್ತು ಮಾಡಲಾಗುತ್ತಿದೆ. ಹೆಚ್ಚಿನ ಉತ್ಪಾದನೆ ಮಾಡುವದರ ಜೊತೆಗೆ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

          ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಪಡೆದ ಸುನೀತಾ ಮನೋಹರ ಮೇಟಿ, ರಾಮನಗೌಡ ಪಾಟೀಲ, ಸಿದ್ದುಬಾ ಪಾಂಡು ಮಾಡಿಕ ಅವರನ್ನು ಸನ್ಮಾನಿಸಲಾಯಿತು. ಇದರ ಜೊತೆಗೆ ಪಿಎಂಎಫ್‍ಎಂಇ ಯೋಜನೆಯ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪ್ರಮಾಣ ಪತ್ರ, ಮಣ್ಣು ಆರೋಗ್ಯ ಚೀಟಿ ವಿತರಣೆ ಹಾಗೂ ಕಬ್ಬಿನಲ್ಲಿ ರವದಿಯ ನಿರ್ವಹಣೆ, ನೈಸರ್ಗಿಕ ಕೃಷಿಯ ಮಾಹಿತಿವುಳ್ಳ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಪ್ರಾರಂಭದಲ್ಲಿ ದೇಶಿ ತಳಿಗಳ ಪ್ರದರ್ಶನ ವೀಕ್ಷಣೆ ಮಾಡಲಾಯಿತು.

           ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅನೀಲಕುಮಾರ ದಡ್ಡಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ತೋವಿವಿಯ ಡೀನ್ ಡಾ.ತಮ್ಮಯ್ಯ, ಕೃಷಿ ಜಂಟಿ ನಿರ್ದೇಶಕ ರುದ್ರೇಶ ಟಿ.ಎಸ್, ಉಪ ಕೃಷಿ ನಿರ್ದೇಶಕರಾದ ಕೆ.ಎಸ್.ಅಗಸನಾಳ, ಮಂಜುಳಾ ಬಸವರಡ್ಡಿ, ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ಬಿದರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು